ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಮೊದಲ ದಿನವೇ ಬರೋಬ್ಬರಿ 120 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಬಾಕ್ಸ್ ಆಫೀಸ್ (Box Office) ರಿಪೋರ್ಟ್ ಪ್ರಕಾರ ಅತೀ ಹೆಚ್ಚು ಕಲೆಕ್ಷನ್ (Collection) ಮಾಡಿದ್ದು ಉತ್ತರ ಪ್ರದೇಶದಲ್ಲಿ. ಅತೀ ಕಡಿಮೆ ಕೇರಳ ಮತ್ತು ತಮಿಳು ನಾಡಿನಲ್ಲಿ ಎಂದು ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ 40 ಕೋಟಿ ರೂಪಾಯಿ, ಆಂಧ್ರ ಪ್ರದೇಶದಲ್ಲಿ 25 ಕೋಟಿ ರೂಪಾಯಿ, ತೆಲಂಗಾಣದಲ್ಲಿ 20 ಕೋಟಿ ರೂಪಾಯಿ, ಕರ್ನಾಟಕದಲ್ಲಿ 7 ಕೋಟಿ ರೂಪಾಯಿ, ಕೇರಳ ಮತ್ತು ತಮಿಳುನಾಡಿನಲ್ಲಿ 2 ಕೋಟಿ ರೂಪಾಯಿ ಮತ್ತು ವಿದೇಶಗಳ ಒಟ್ಟು ಕಲೆಕ್ಷನ್ 25 ಕೋಟಿ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಮೊದಲ ದಿನದ ಕಲೆಕ್ಷನ್ 120 ಕೋಟಿ ರೂಪಾಯಿ.
ಒಂದು ಕಡೆ ಬಾಕ್ಸ್ ಆಫೀಸನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮತ್ತು ಸಿನಿಮಾವನ್ನು ನಿಲ್ಲಿಸಬೇಕು ಎನ್ನುವ ಒತ್ತಾಯ ಕೂಡ ಕೇಳಿ ಬಂದಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಮೇಕಿಂಗ್ ಮತ್ತು ಕಂಟೆಂಟ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ರಾಮಾಯಣವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಪರೋಕ್ಷವಾಗಿ ಆದಿಪುರುಷ ಸಿನಿಮಾ ತಂಡಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಪಾಠ ಮಾಡಿದ್ದಾರೆ. ರಾಮನ (Rama) ಹೆಸರನ್ನು ದಯವಿಟ್ಟು ಕೆಡಿಸಬೇಡಿ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿರುವ ಆದಿಪುರುಷ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ದೆಹಲಿ (Delhi) ಹೈಕೋರ್ಟಿಗೆ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ ಹಿಂದೂಪರ ಸಂಘಟನೆಗಳು. ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗುವಂತಹ ಸಾಕಷ್ಟು ಅಂಶಗಳು ಇವೆ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಸಂಘಟನೆಗಳು ಮನವಿ ಮಾಡಿಕೊಂಡಿವೆ.
ರಾಮಾಯಣವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ. ಅದು ಹಿಂದೂಗಳಿಗೆ ಮತ್ತು ಹಿಂದೂ (Hindu) ದೇವರುಗಳಿಗೆ ಮಾಡಿರುವ ಅಪಮಾನ. ಈ ಹಿಂದೆಯೇ ಅನೇಕ ಅಂಶಗಳನ್ನು ಚಿತ್ರತಂಡದ ಗಮನಕ್ಕೆ ತರಲಾಗಿತ್ತು. ಎಲ್ಲವನ್ನೂ ಬದಲಾವಣೆ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ, ಯಾವುದೇ ಬದಲಾವಣೆಯನ್ನು ಮಾಡದೇ ಹಳೆ ಸಿನಿಮಾವನ್ನೇ ಬಿಡುಗಡೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.