ಬೆಂಗಳೂರು: ಯೋಗಾನಂದ ಮುದ್ದಾನ್ ನಿರ್ದೇಶನದ ಚೊಚ್ಚಲ ಚಿತ್ರ ಅಧ್ಯಕ್ಷ ಇನ್ ಅಮೆರಿಕ. ಈ ಹಿಂದೆ ಅಧ್ಯಕ್ಷ ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿಯೇ ಗೆಲುವು ಕಂಡಿದ್ದವರು ಶರಣ್. ಅಧ್ಯಕ್ಷನಾಗಿ ಅವತಾರವೆತ್ತಿದ್ದ ಅವರನ್ನು ಕನ್ನಡದ ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದರು. ಇದೀಗ ಅವರು ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ಮೂಲಕ ಈ ಹಿಂದಿನ ಅಧ್ಯಕ್ಷನ ಪಾತ್ರವನ್ನು ಮೀರಿಸುವಂಥಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಮೂಲಕ ಶರಣ್‍ಗೆ ರಾಗಿಣಿ ದ್ವಿವೇದಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ರಾಗಿಣಿ ಈ ಹಿಂದೆ ಶರಣ್ ಅವರ ಜೊತೆ ಹಾಡಿನಲ್ಲಿಯಷ್ಟೇ ಕಾಣಿಸಿಕೊಂಡಿದ್ದರು. ಹೀಗೆ ಹಾಡಿನ ಮೂಲಕವೇ ಈ ಜೋಡಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದು ಸುಳ್ಳಲ್ಲ. ಒಂದಷ್ಟು ಮಂದಿ ಇಡೀ ಚಿತ್ರದಲ್ಲಿ ರಾಗಿಣಿ ಮತ್ತು ಶರಣ್ ಅವರನ್ನು ಒಟ್ಟಿಗೆ ನೋಡುವಂಥಾ ಅಭಿಲಾಶೆ ಹೊಂದಿದ್ದರು. ಆದರೆ ಬಹುಕಾಲದವರೆಗೂ ಕೂಡಾ ಇದು ಸಾಧ್ಯವಾಗಿರಲಿಲ್ಲ. ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ನಾಯಕಿಯ ಪಾತ್ರಕ್ಕೆ ರಾಗಿಣಿ ಬಿಟ್ಟರೆ ಬೇರ್ಯಾರಿಗೂ ಸೂಟ್ ಆಗೋದಿಲ್ಲ ಎಂಬ ಕಾರಣದಿಂದಲೇ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
Advertisement
Advertisement
ರಾಗಿಣಿ ಕೂಡಾ ಈ ಕಥೆ ಮತ್ತು ಪಾತ್ರವನ್ನು ಮೆಚ್ಚಿಕೊಂಡೇ ಶರಣ್‍ಗೆ ಜೋಡಿಯಾಗಿ ನಟಿಸಲು ಒಪ್ಪಿಕೊಂಡಿದ್ದರಂತೆ. ನಿರ್ದೇಶಕ ಯೋಗಾನಂದ್ ಸೇರಿದಂತೆ ಇಡೀ ಚಿತ್ರತಂಡ ನಿರೀಕ್ಷೆ ಮಾಡಿದ್ದ ಮಟ್ಟ ಮೀರಿ ರಾಗಿಣಿ ಈ ಪಾತ್ರದಲ್ಲಿ ಮಿಂಚಿದ್ದಾರಂತೆ. ಶರಣ್ ಮತ್ತು ರಾಗಿಣಿ ಜೋಡಿಯ ಕಮಾಲ್ ಏನನ್ನೋದು ಈ ವಾರವೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರ ಈ ವಾರ ಅದ್ದೂರಿಯಾಗಿ ತೆರೆಗಾಣಲಿದೆ. ಈ ಮೂಲಕ ಹಿಂದೆ ಅಧ್ಯಕ್ಷ ಚಿತ್ರದ ಮೂಲಕ ಶರಣ್ ಅವರಿಗೆ ಸಿಕ್ಕಿದ್ದ ದೊಡ್ಡ ಗೆಲುವಿನ ಇತಿಹಾಸ ಮರುಕಳಿಸೋ ಲಕ್ಷಣಗಳೂ ಕಾಣಿಸುತ್ತಿವೆ.