ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಅಧಿಪತ್ರ (Adhipatra) ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಶುಭಂ ಹೊಟೇಲಿನಲ್ಲಿ ನಡೆದ ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯಲ್ಲಿ ಈ ಬಹುನಿರೀಕ್ಷಿತ ಟ್ರೈಲರ್ ಲೋಕಾರ್ಪಣೆಗೊಂಡಿದೆ.
ಆರಂಭದಿಂದ ಇಲ್ಲಿಯವರೆಗೂ ಟೈಟಲ್ಲು, ಭಿನ್ನ ಕಥೆಯ ಸುಳಿವಿನೊಂದಿಗೆ ಸದ್ದು ಮಾಡುತ್ತಾ ಬಂದಿದ್ದ ಈ ಚಿತ್ರ ಫೆಬ್ರವರಿ 7ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಒಂದು ಪತ್ರಿಕಾಗೋಷ್ಠಿಯ ಪರಿಧಿಯಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸೇರಿದ್ದ ಜನ ಮತ್ತು ಈ ಟ್ರೈಲರ್‌ಗೆ ಸಿಗುತ್ತಿರುವ ವ್ಯಾಪಕ ಮೆಚ್ಚುಗೆ ಕಂಡು ಚಿತ್ರತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ಮೂಡಿಕೊಂಡಿದೆ.
ಶುಭಂ ಹೊಟೇಲಿನ ಸಭಾಂಗಣದಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ದಿವಾಕರ್ ಶೆಟ್ಟಿ, ರಾಜೇಶ್ ಕೀಳಂಬಿ ಅತಿಥಿಗಳಾಗಿ ಹಾಜರಿದ್ದರು. ರೂಪೇಶ್ ಶೆಟ್ಟಿ, ನಿರ್ದೇಶಕ ಚಯನ್ ಶೆಟ್ಟಿ, ನಾಯಕಿ ಜಾನ್ಹವಿ (Jhanvi) ಈ ಸಂದರ್ಭದಲ್ಲಿ ಶಿವಮೊಗ್ಗದ ಜನತೆಗೆ ಕೃತಜ್ಞತೆ ಸಲ್ಲಿಸುತ್ತಲೇ ಈ ಸಿನಿಮಾ ಕುರಿತಾದ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಕಾರ್ಯಕ್ರಮಕ್ಕೆ ಇನ್ನೂರಕ್ಕೂ ಹೆಚ್ಚು ಸಿನಿಮಾ ಪ್ರೇಮಿಗಳು ಆಗಮಿಸಿ ಸಂಭ್ರಮಿಸಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಸಿನಿಮಾ ಎಂಬ ವಿಚಾರವನ್ನು ಈ ಹಿಂದೆಯೇ ಚಿತ್ರತಂಡ ಹೇಳಿಕೊಂಡಿತ್ತು. ಈ ಟ್ರೈಲರ್ ಮೂಲಕ ಒಟ್ಟಾರೆ ಕಥಾನಕದ ಓಘ ಅದೆಂಥಾದ್ದಿದೆ ಅನ್ನೋದರ ಸ್ಪಷ್ಟ ಸುಳಿವು ಸಿಕ್ಕಿದೆ. ಕಿನಾರೆ, ಅಲ್ಲಿನ ಜನಜೀವನ, ಸಂಸ್ಕೃತಿಯೊಂದಿಗೆ ಬೆರೆತುಕೊಂಡಂತಿರೋ ಥ್ರಿಲ್ಲರ್ ಕಥೆ ನೋಡುಗರನ್ನೆಲ್ಲ ಅಕ್ಷರಶಃ ಆವರಿಸಿಕೊಂಡಿದೆ. ಈ ಮೂಲಕ ಚಯನ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಮಹತ್ವದ ಕಥೆಯೊಂದಕ್ಕೆ ದೃಷ್ಯರೂಪ ನೀಡಿರೋ ಲಕ್ಷಣ ದಟ್ಟವಾಗಿದೆ. ರೂಪೇಶ್ ಶೆಟ್ಟಿ ಅವರ್ ಪಾತ್ರ, ಅದರ ಖದರ್ ಕೂಡಾ ಈ ಟ್ರೈಲರಿನ ಹೈಲೈಟುಗಳಲ್ಲೊಂದಾಗಿ ದಾಖಲಾಗುವಂತಿದೆ.
ಇದು ಚಯನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ. ಈಗ ಬಿಡುಗಡೆಗೊಂಡಿರೋ ಟ್ರೈಲರಿನಲ್ಲಿ ಈ ಮೊದಲ ಹೆಜ್ಜೆ ಭರ್ಜರಿಯಾಗಿರೋ ಸುಳಿವು ಸಿಕ್ಕಿದೆ. ವರ್ಷಗಟ್ಟಲೆ ಶ್ರಮ ವಹಿಸಿ, ಗ್ರೌಂಡ್ ವರ್ಕ್ ಮಾಡಿಯೇ ಚಯನ್ ಈ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಬಿಗ್ ಬಾಸ್ ಶೋ ಗೆದ್ದುಕೊಂಡಿದ್ದ ರೂಪೇಶ್ ಶೆಟ್ಟಿ, ಆ ಬಳಖಿಕ ನಟಿಸಿರುವ ಮೊದಲ ಕನ್ನಡ ಚಿತ್ರ ಅಧಿಪಪತ್ರ. ಈ ಮೂಲಕ ನಿರೂಪಕಿಯಾಗಿದ್ದ ಜಾನ್ಹವಿ ನಾಯಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಇಂಥಾದ್ದೊಂದು ಪ್ರತಿಭಾನ್ವಿತರ ತಂಡದೊಂದಿಗಿನ ಮೊದಲ ಹೆಜ್ಜೆಗಳ ಕುರಿತು ಅವರೂ ಕೂಡಾ ಭರವಸೆಯ ಮನಾತುಗಳನ್ನಾಡಿದ್ದಾರೆ.
ಇನ್ನುಳಿದಂತೆ ಕಾಂತಾರ ಚಿತ್ರದಲ್ಲಿ ಹೆಸರುವಾಸಿಯಾಗಿದ್ದ ಕಲಾವಿದರ ದಂಡು ಅಧಿಪತ್ರದಲ್ಲಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ. ಇದೀಗ ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿರುವ ಅಧಿಪತ್ರ ಫೆಬ್ರವರಿ 7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.