ಮಂಗಳೂರು: ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು (Bengaluru-Mangaluru Train) ನಡುವೆ ಹೆಚ್ಚುವರಿ ರೈಲು ಸೇವೆಗೆ ಅನುಮತಿ ನೀಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಹೆಚ್ಚುವರಿ ರೈಲು ಸೇವೆ ಕಲ್ಪಿಸುವಂತೆ ಮನವಿ ಮಾಡಿ ರೈಲ್ವೆ ಇಲಾಖೆಗೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ (Captain Brijesh Chowta) ಪತ್ರ ಬರೆದಿದ್ದರು. ಪತ್ರ ತಲುಪಿದ ಕೇವಲ ಒಂದು ಗಂಟೆಯಲ್ಲೇ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭಕ್ಕೆ ಅನುಮತಿ ನೀಡಿದೆ. ಇದನ್ನೂ ಓದಿ: ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತಕ್ಕೆ 7 ಮಂದಿ ಬಲಿ – ನದಿಗೆ ಬಿತ್ತು ಟ್ಯಾಂಕರ್
ಕರಾವಳಿ ಭಾಗದಲ್ಲಿ ಹಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿದ್ದರು.
ಸಂಸದರ ಪತ್ರ ತಲುಪಿದ ತಕ್ಷಣವೇ ರೈಲ್ವೆ ಇಲಾಖೆ ಸ್ಪಂದಿಸಿದೆ. ನಾಲ್ಕು ದಿನಗಳ ಕಾಲ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲನ್ನು ನೀಡಿ ಆದೇಶ ಹೊರಡಿಸಿದೆ.
ರಸ್ತೆ ಸಂಪರ್ಕ ಕಡಿತದಿಂದ ಉಂಟಾದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನರ ಅವಶ್ಯಕತೆ ಪರಿಗಣಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಶಿರೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಭೂ ಸಮಾಧಿ – ಅಂತ್ಯಸಂಸ್ಕಾರ ಮಾಡಲೂ ಜನರಿಲ್ಲ
ವಿಶೇಷ ರೈಲುಗಳ ವಿವರ:
* ಜುಲೈ 19: ರೈಲು ಸಂಖ್ಯೆ 06547 – ಎಸ್‌ಬಿಸಿ ಬೆಂಗಳೂರಿನಿಂದ ಹೊರಡಲಿದೆ
* ಜು.20: ರೈಲು ಸಂಖ್ಯೆ 06548 – ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಬರಲಿದೆ.
* ಜು.21 ಹಾಗೂ 22: ರೈಲು ಸಂಖ್ಯೆ 06549 – ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.
* ಜು.21 ಹಾಗೂ 22: ರೈಲು ಸಂಖ್ಯೆ 06550 – ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಬರಲಿದೆ.