– ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಹಿನ್ನೆಲೆ ಕ್ರಮ
ಬೆಂಗಳೂರು: ಜುಲೈ 6ರಿಂದ ಜಾರಿಗೆ ಬರುವಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ (Purple Line Metro Train) ವೇಳಾಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ಹೆಚ್ಚುವರಿ ಮೆಟ್ರೋ ರೈಲು ಸೇವೆ ಕಲ್ಪಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ (kempegowda Metro station) ಪ್ರಸ್ತುತ 9 ರೈಲುಗಳ ಬದಲಿಗೆ ಹೆಚ್ಚುವರಿ 15 ಮೆಟ್ರೋ ರೈಲುಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗುತ್ತದೆ. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು, ಅಗ್ರಹಾರದ (ಐಟಿಪಿಎಲ್) ವರೆಗೆ, 4 ರೈಲುಗಳು ವೈಟ್‌ಫೀಲ್ಡ್ ಮತ್ತು 1 ರೈಲು ಬೈಯಪ್ಪನಹಳ್ಳಿ ಕಡೆಗೆ ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅದರಂತೆ ರೈಲುಗಳು ಕೆಂಪೇಗೌಡ ನಿಲ್ದಾಣದಿಂದ ಬೆಳಗ್ಗೆ 8:48 ಗಂಟೆಯಿಂದ 8:58, 9:18, 9:29, 9:39, 9:50, 10:00, 10:21, 10:39, 10:50, 11:00, 11:22 ಗಂಟೆಗೆ ಪೂರ್ವಕ್ಕೆ ಸಂಚರಿಸಲಿವೆ. ಅಲ್ಲದೇ ಮೆಜೆಸ್ಟಿಕ್‌ನಲ್ಲಿ 3.3 ನಿಮಿಷಗಳ ಆವರ್ತನದಲ್ಲಿ ಬೆಳಗ್ಗೆ 10:25 ಗಂಟೆ ವರೆಗೆ ನಿಯಮಿತವಾಗಿ ಸಾಗುವ ರೈಲು ಸೇವೆಯೂ ಲಭ್ಯವಿರಲಿದೆ.
ಪ್ರಯಾಣಿಕರ ಬೇಡಿಕೆ ಪೂರೈಸಲು ಪ್ರಸ್ತುತ, ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ITPL) ಅಥವಾ ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ಆವರ್ತನದಲ್ಲಿ ಲಭ್ಯವಿರಲಿದೆ.
ಜೊತೆಗೆ 5 ನಿಮಿಷಗಳ ಆವರ್ತನದಲ್ಲಿ ಬೈಯಪ್ಪನಹಳ್ಳಿಯಿಂದ ಸಂಜೆ 4:40ರ ಬದಲಿಗೆ 4:20ಕ್ಕೆ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಪ್ರಾರಂಭವಾಗಲಿದೆ. ಆದ್ರೆ ಹಸಿರು ಮಾರ್ಗದ ರೈಲುಗಳಲ್ಲಿ ಯಾವುದೇ ಬದಲಾವಣೆಯಿಲ್ಲ, ಎಂದಿನಂತೆ ಸಂಚರಿಸಲಿವೆ. ಪ್ರಯಾಣಿಕರು ವೇಳಾಪಟ್ಟಿಯನ್ನು ಗಮನಿಸುವಂತೆ ಬಿಎಂಆರ್‌ಎಲ್ ಕೋರಿದೆ.