ಕಾರವಾರ: ಆದೇಶ ಆಗಿ 10 ದಿನ ಕಳೆದರೂ ಕಾರವಾರ ಅಪರ ಜಿಲ್ಲಾಧಿಕಾರಿ ಖುರ್ಚಿ ಖಾಲಿ ಉಳಿದಿದೆ. ವರ್ಗ ಆದರೂ ಹಿರಿಯ ಕೆಎಎಸ್ ಅಧಿಕಾರಿ ಹಾಜರಾಗಲು ಸಚಿವರು ಬಿಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಪರ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ಸಜೀದ್ ಮುಲ್ಲಾ ಅವರು ಅಧಿಕಾರ ವಹಿಸಿಕೊಳ್ಳದೇ ಬೆಂಗಳೂರಿನಲ್ಲೇ ಉಳಿದಿದ್ದು, ಜಿಲ್ಲಾಧಿಕಾರಿ ಕಚೇರಿಯ ಅಪರ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಲಾಗಿದೆ.
ಕಳೆದ ಹತ್ತು ದಿನಗಳ ಹಿಂದೆ ಅಪರ ಜಿಲ್ಲಾಧಿಕಾರಿ ಆಗಿದ್ದ ಪ್ರಕಾಶ್ ರಜಪೂತ ಬಾಗಲಕೋಟೆಗೆ ವರ್ಗಾವಣೆ ಆಗಿದ್ದಾರೆ. ಅವರ ಸ್ಥಾನಕ್ಕೆ ಹಿರಿಯ ಕೆಎಎಸ್ ಅಧಿಕಾರಿ ಸಜೀದ್ ಮುಲ್ಲಾ ನೇಮಕ ಮಾಡಲಾಗಿತ್ತು. ಆದರೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದೇ ಅಪರ ಜಿಲ್ಲಾಧಿಕಾರಿ ನೇಮಕ ಮಾಡಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗಂಗೂಬಾಯಿ ಮಾನಕರ್‌ರನ್ನು ಸಹ ತನಗೆ ತಿಳಿಯದಂತೆ ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ಗರಂ ಆಗಿದ್ದಾರೆ.
ಹೀಗಾಗಿ ಅಪರ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಳ್ಳಲು ಬಿಡದೆ ಸತಾಯಿಸಿದ್ದು, ಇದೀಗ ವರ್ಗಾವಣೆಗೊಂಡು ಹತ್ತು ದಿನವಾದರೂ ಅಪರ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಳ್ಳದೇ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡುವಂತಾಗಿದೆ. ಇದರಿಂದ ಎಲ್ಲಾ ಕೆಲಸವೂ ಜಿಲ್ಲಾಧಿಕಾರಿ ಹೆಗಲ ಮೇಲೆ ಬೀಳುವಂತಾಗಿದೆ.