ಬಾಲಿವುಡ್ ನಟಿ ಜಿಯಾ ಖಾನ್ (Zia Khan) ಆತ್ಮಹತ್ಯೆಯ ಕುರಿತಂತೆ ಹತ್ತು ವರ್ಷಗಳ ನಂತರ ಇಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು (Judgment) ಪ್ರಕಟಿಸಿದೆ. ಪ್ರಮುಖ ಆರೋಪಿ ಹಾಗೂ ಜಿಯಾ ಗೆಳೆಯ ಸೂರಜ್ ಪಂಚೋಲಿ (Suraj Pancholi) ಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಹೈಕೋರ್ಟ್ (High Court) ಮೆಟ್ಟಿಲು ಏರುವುದಾಗಿ ಜಿಯಾ ತಾಯಿ ರಬಿಯಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗು ಹೇಗೆ ಸತ್ತಿತು ಎನ್ನುವುದರ ಸತ್ಯ ನನಗೆ ಗೊತ್ತಾಗಬೇಕು. ಇದೊಂದು ಕೊಲೆ ಎಂದು ಮತ್ತೆ ರಬಿಯಾ (Rabia) ನುಡಿದಿದ್ದಾರೆ.
ಏನಿದು ಜಿಯಾ ಖಾನ್ ಸಾವಿನ ಪ್ರಕರಣ?
ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣ ಬಾಲಿವುಡ್ ಸಿನಿಮಾ ರಂಗದಲ್ಲಿ ಭಾರೀ ಆಘಾತ ಮೂಡಿಸಿತ್ತು. ಚಿತ್ರರಂಗದಲ್ಲಿ ಆಗ ತಾನೆ ಮಿಂಚುತ್ತಿದ್ದ ಜಿಯಾ ಏಕಾಏಕಿ 2013ರ ಜೂನ್ 3ರಂದು ಮುಂಬೈನ ಜುಹೂ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಸಾವಿಗೆ ಅವರ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ಕಾರಣ ಎಂದು ಹೇಳಲಾಗಿತ್ತು.
ಜಿಯಾ ಖಾನ್ ಬರೆದ ಡೆತ್ ನೋಟ್ ಆಧರಿಸಿ ಪ್ರಿಯಕರ ಸೂರಜ್ ಪಾಂಚೋಲಿ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಆನಂತರ ಜುಲೈನಲ್ಲಿ ಸೂರಜ್ ಜಾಮೀನು ಪಡೆದರು. ಜಿಯಾ ಖಾನ್ ಅವರ ತಾಯಿ ರಬಿಯಾ ನಂತರ ವಿಶೇಷ ಮನವಿ ಸಲ್ಲಿಸಿದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಜಿಯಾ ಖಾನ್ ತಾಯಿ ರಬಿಯಾ ತಮ್ಮ ವಿರುದ್ಧ ಮಾನಹಾನಿ ಮಾಡುವಂತಹ ಕೆಲಸಗಳಿಗೆ ಕೈ ಹಾಕಿದ್ದಾರೆ ಎಂದು ಸೂರಜ್ ಪಾಂಚೋಲಿ, ಜಿಯಾ ತಾಯಿಯ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸಿದ್ದರು. ರಬಿಯಾ ನೀಡಿದ ದೂರಿನ ಮೇಲೆ ಸಿಬಿಐ ಅಧಿಕಾರಿಗಳು ಸೂರಜ್ ಮನೆಯ ಮೇಲೆ ದಾಳಿ ಮಾಡಿದರು. ನಂತರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಮತ್ತೆ ಸಪ್ಲಿಮೆಂಟರಿ ಚಾರ್ಜ್ ಶೀಟ್ ದಾಖಲಿಸಿದ್ದರು.
ತನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಹಲವಾರು ಪ್ರಯತ್ನಗಳನ್ನು ಮಾಡಿದ್ದರು ರುಬಿಯಾ. ವಿಶೇಷ ತನಿಖಾ ದಳ ರಚಿಸುವಂತೆ ಕೋರ್ಟಿಗೆ ಮೊರೆ ಹೋದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದರು. ಕೇಸ್ ವಿಚಾರಣೆ ಬೇಗ ಮುಗಿಸುವಂತೆ ಮುಂಬೈ ಕೋರ್ಟಿಗೂ ಮನವಿ ಮಾಡಿಕೊಂಡಿದ್ದರು.
ಸೂರಜ್ ಪಾಂಚೋಲಿ ಕೂಡ ಈ ಪ್ರಕರಣದಲ್ಲಿ ಅಷ್ಟೇ ಹೋರಾಟ ಮಾಡಿದ್ದರು. ಆ ಸಾವಿಗೂ ನನಗೂ ಸಂಬಂಧವಿಲ್ಲ ಎಂದು ವಾದಿಸುತ್ತಲೇ ಬಂದರು. ಸುದೀರ್ಘ ಹತ್ತು ವರ್ಷಗಳ ನಂತರ 2023 ಏಪ್ರಿಲ್ 20 ರಂದು ಅಂತಿವ ವಾದ- ಪ್ರತಿವಾದ ಆಲಿಸಿದ್ದ ವಿಶೇಷ ನ್ಯಾಯಮೂರ್ತಿಗಳಾದ ಎ.ಎಸ್. ಸಯ್ಯದ್ ಅವರು ತೀರ್ಪು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟವಾಗಿದೆ. ಸೂರಜ್ ಪಾಂಚೋಲಿ ಪರವಾಗಿ ಮಾನ್ಯ ನ್ಯಾಯಾಲಯ ತೀರ್ಪು ನೀಡಿದೆ.