ನವದೆಹಲಿ: ಮೆಗಾಸ್ಟಾರ್ ಚಿರಂಜೀವಿ ಅವರ ಫಿಲ್ಮ್ ಅಂದರೆ ಅಭಿಮಾನಿಗಳಿಗೆ ಸ್ವಲ್ಪ ಕ್ರೇಜ್ ಜಾಸ್ತಿನೇ ಇರುತ್ತದೆ. ಹಾಗೆಯೇ ಇದೀಗ ಅವರು 152ನೇ ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲಗಳು ತುಸು ಜಾಸ್ತಿಯೇ ಇರುತ್ತದೆ. ಆದರೆ ಈ ಮಧ್ಯೆ ಚಿರು ಹಾಗೂ ಎವರ್ ಗ್ರೀನ್ ಚೆಲುವೆ ತ್ರಿಶಾ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಹೊರಬಿದ್ದಿದೆ.
ಹೌದು. ಚಿರು ಅಭಿನಯದ ನೂತನ ಚಿತ್ರ ‘ಆಚಾರ್ಯ’ದಲ್ಲಿ ನಾನು ನಟಿಸಿಲ್ಲ ಎಂದು ತ್ರಿಶಾ ಹೊರಬಂದಿದ್ದಾರೆ. ಈ ವಿಚಾರ ಇಬ್ಬರ ಅಭಿಮಾನಿಗಳಲ್ಲೂ ನಿರಾಶೆ ಮೂಡಿಸಿದೆ.
https://twitter.com/trishtrashers/status/1238438787488743426
ಈ ಬಗ್ಗೆ ಟ್ವಿಟ್ ಮಾಡಿರುವ ತ್ರಿಶಾ, ಕೆಲವೊಂದು ವಿಚಾರಗಳು ನಾವು ಮೊದಲೇ ಚರ್ಚಿಸಿದಂತೆ ಆಗಲ್ಲ. ಸಣ್ಣ ಭಿನ್ನಾಭಿಪ್ರಾಯಗಳಿಂದ ಚಿರಂಜೀವಿ ಸರ್ ಸಿನಿಮಾದಿಂದ ಹೊರಬರಲು ನಿರ್ಧರಿಸಿದ್ದೇನೆ. ಆದರೆ ಆದಷ್ಟು ಬೇಗ ನೂತನ ಪ್ರಾಜೆಕ್ಟ್ ನೊಂದಿಗೆ ಮತ್ತೆ ನಿಮ್ಮ ಮುಂದೆ ಬರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ಈ ಹಿಂದೆ 2006ರಲ್ಲಿ ತೆರೆಕಂಡಿದ್ದ ಸ್ಟ್ಯಾಲಿನ್ ಚಿತ್ರದಲ್ಲಿ ತ್ರಿಶಾ ಹಾಗೂ ಚಿರಂಜೀವಿ ತೆರೆ ಹಂಚಿಕೊಂಡಿದ್ದರು. ಈ ಹಿಟ್ ಜೋಡಿ ಮತ್ತೆ ಜೊತೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದು, ಸಿನಿಮಾಕ್ಕಾಗಿ ಕಾಯುತ್ತಿದ್ದರು. ಆದರೆ ಇದೀಗ ತ್ರಿಶಾ ಅವರ ಈ ಹೇಳಿಕೆಯಿಂದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.