ಚಿಕ್ಕಬಳ್ಳಾಪುರ: ಇಲ್ಲಿನ ಆದಿಯೋಗಿ ಈಶಾ ಕೇಂದ್ರದಲ್ಲಿ (Isha Foundation) ಆಯೋಜಿಸಲಾಗಿದ್ದ ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಗ್ರಾಮೀಣ ಭಾಗದ ಮಹಿಳೆಯರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ (Srinidhi Shetty), ಆಟಗಾರರಿಗೆ ಶುಭ ಹಾರೈಸಿದ್ದಾರೆ.
ಮಹಿಳೆಯರು ಹಾಗೂ ಯುವತಿಯರಿಗೆ ಥ್ರೋ ಬಾಲ್ ಹಾಗೂ ಹಗ್ಗ ಜಗ್ಗಾಟದ ಸ್ಪರ್ಧೆ ಆಯೋಜಿಸಲಾಗಿತ್ತು. ಪುರಷರಿಗೆ ವಾಲಿಬಾಲ್ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ರಾಜ್ಯದ ನಾನಾ ಮೂಲೆಗಳಿಂದ ನೂರಾರು ತಂಡಗಳು ಆಗಮಿಸಿ ಗ್ರಾಮೋತ್ಸವದಲ್ಲಿ ಕ್ರೀಡೆಗಳನ್ನ ಆಡುವ ಮೂಲಕ ಎಲ್ಲರ ಗಮನ ಸೆಳೆದರು.
ಭಾಗವಹಿಸಿದವರು ಯಾರೂ ಸಹ ವೃತ್ತಿಪರ ಆಟಗಾರರಲ್ಲ, ಬದಲಾಗಿ ಗ್ರಾಮೀಣ ಭಾಗದ ಹಳ್ಳಿಗಾಡಿನ ಮಹಿಳೆಯರು ಹಾಗೂ ಪುರುಷರು. ಯುವಕ-ಯುವತಿಯರಲ್ಲಿ ಕ್ರೀಡೆ ಹಾಗೂ ಯೋಗದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿತ್ತು.