ಬಳ್ಳಾರಿ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day 2024) ಹಿನ್ನೆಲೆಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಳ್ಳಾರಿಯ ಸಂಡೂರ ತಾಲೂಕಿನ ತೋರಣಗಲ್ ಬಳಿಯ ಜಿಂದಾಲ್ ವಿದ್ಯಾನಗರದಲ್ಲಿ ಯೋಗ ಪ್ರದರ್ಶನ ಮಾಡಿದರು.
ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶನ ನೀಡಿದರು. ಇದರೊಂದಿಗೆ ನಟಿ ಶ್ರೀಲೀಲಾ (Actress Sreeleela), ಸಚಿವ ಸಂತೋಷ ಲಾಡ್, ಸಂಸದ ಈ. ತುಕಾರಾಂ ಜಿಲ್ಲೆಯ ಶಾಸಕರು ಹಾಗೂ ಮುಖಂಡರು ಸಿಎಂಗೆ ಸಾಥ್ ನೀಡಿದರು. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್, ಕ್ರಿಕೆಟಿಗ ಮನಿಷ್ ಪಾಂಡೆ ಸಾಥ್
ವಚನಾನಂದ ಶ್ರೀಗಳ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಆರಂಭವಾಯಿತು. ಅವಧೂತ ವಿನಯ್ ಗುರೂಜಿ ಅವರು ಯೋಗ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿವಿಧ ಯೋಗಾಸನಗಳ ಸೂಚನೆ ನೀಡುತ್ತಾ, ತಾವೂ ಯೋಗ ಆಸನಗಳ ಪ್ರದರ್ಶನ ನಡೆಸಿಕೊಟ್ಟರು. ಇದೇ ವೇಳೆ ಸಾಂಪ್ರದಾಯಿಕವಾಗಿ ಪಂಚೆ ಶಲ್ಯ ಧರಿಸಿದ್ದ ಸಿದ್ದರಾಮಯ್ಯ ಅವರು ವಚನಾನಂದ ಶ್ರೀಗಳ ಸೂಚನೆಯಂತೆ ಏಕಾಗ್ರತೆಯಿಂದ ಯೋಗ ಪ್ರದರ್ಶನ ಮಾಡಿದರು. ವೇದಿಕೆಯಲ್ಲಿ ನಟಿ ಶ್ರೀಲೀಲಾ ಸಹ ತದೇಕಚಿತ್ತದಿಂದ ಯೋಗ ಮಾಡಿದರು. ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳೂ ಪಾಲ್ಗೊಂಡಿದ್ದರು.
ಈ ಬಾರಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ವಸ್ತು ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ.
ಯೋಗ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಿಎಂ ಹೊಸಪೇಟೆಯ ಡಿಸಿ ಕಚೇರಿಯಲ್ಲಿ ನಡೆಯಲಿರುವ ಕೆಡಿಪಿ ಸಭೆಗೆ ತೆರಳಲಿದ್ದಾರೆ. ಇದನ್ನೂ ಓದಿ: International Yoga Day: ‘ಯೋಗ’ವೆಂಬ ಗಿನ್ನಿಸ್ ರೆಕಾರ್ಡ್ – ಯಾವ ವರ್ಷ, ಎಲ್ಲಿ ದಾಖಲೆಯಾಗಿತ್ತು?