ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಪ್ರಕರಣ ಒಂದು ರೀತಿಯಲ್ಲಿ ಪೊಲೀಸರಿಗೆ ತಲೆಬಿಸಿಯಾಗಿದ್ದರೆ, ಮತ್ತೊಂದು ಕಡೆ ಕೆಜಿ ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ತೆಲುಗು ನಟಿ ಸೌಮ್ಯ ಶೆಟ್ಟಿ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಪರಿಚಿತರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಕದ್ದು ಸೌಮ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ತೆಲುಗು ಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟಿಯಾಗಿರುವ ಸೌಮ್ಯ, ನಿವೃತ್ತ ಅಂಚೆ ಇಲಾಖೆಯ ನೌಕರರ ಮಗಳ ಜೊತೆ ಸ್ನೇಹವಿತ್ತು. ಆಗಾಗ್ಗೆ ಮನೆಗೆ ಬರುತ್ತಿದ್ದಳು ಸೌಮ್ಯ. ಆ ಮನೆಯಲ್ಲಿ ಬಂಗಾರ ಇರುವುದು ಗೊತ್ತಾಗಿ, ವಾಶ್ ರೂಮ್ ಗೆ ಹೋಗುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದಳು ಎಂದು ದೂರು ನೀಡಲಾಗಿದೆ.
ತಮ್ಮ ಮನೆಗೆ ಬರುತ್ತಿದ್ದ ಸೌಮ್ಯ, ಆಗಾಗ್ಗೆ ಚಿನ್ನ ಕಳ್ಳತನ ಮಾಡುವುದು ಮನೆಯವರ ಗಮನಕ್ಕೆ ಬಂದಿಲ್ಲ. ಮದುವೆಗೆ ಹೋಗಲು ಆಭರಣ ಹುಡುಕಿದಾಗ ಮಾತ್ರ ಕಳ್ಳತನವಾಗಿರೋದು ಗೊತ್ತಾಗಿದೆ. ಕೂಡಲೇ ಅನುಮಾನಗೊಂಡು ಪೊಲೀಸ್ ರಿಗೆ ದೂರು ನೀಡಿದ್ದಾರೆ. ಸೌಮ್ಯ ತಮ್ಮ ಮನೆಗೆ ಬರುತ್ತಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಕೊನೆಗೂ ಸೌಮ್ಯಳನ್ನು ಪತ್ತೆ ಮಾಡಿರೋ ವಿಶಾಖಪಟ್ಟಣಂ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.