Bengaluru City
ಮಗನ ಫೋಟೋ, ಹೆಸರು ರಿವೀಲ್ ಮಾಡಿದ ‘ಮಜಾ’ ರಾಣಿ

ಬೆಂಗಳೂರು: ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಮೊದಲ ಬಾರಿಗೆ ತಮ್ಮ ಮಗನ ಫೋಟೋ ಮತ್ತು ಹೆಸರನ್ನು ರಿವೀಲ್ ಮಾಡಿದ್ದಾರೆ.
ಶ್ವೇತಾ ಅವರು ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೂ ತಮ್ಮ ಮಗನ ಫೋಟೋವನ್ನು ಮಾತ್ರ ಎಲ್ಲೂ ರಿವೀಲ್ ಮಾಡಿರಲಿಲ್ಲ. ಇದೀಗ ಭಾನುವಾರ 26ರಂದು ವಿಶೇಷ ದಿನದ ಪ್ರಯುಕ್ತ ತಮ್ಮ ಪುತ್ರನ ಫೋಟೋ ಮತ್ತು ಹೆಸರನ್ನು ಬಹಿರಂಗಪಡಿಸಿದ್ದಾರೆ.
ಮಗನಿಗೆ ಕೊಡಗಿನ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲಿ ಒಂದು ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ತಮ್ಮ ಮಗನ ಹೆಸರನ್ನು ತಿಳಿಸಿದ್ದಾರೆ. ಜೊತೆಗೆ ದಿನಾಂಕ 26ರಂದೇ ಫೋಟೋ ರಿವೀಲ್ ಮಾಡಿದ್ದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.
“ಇದೇ ದಿನ ಜನವರಿ 26ರಂದು ಒಂದೂವರೆ ದಶಕದ ಹಿಂದೆ ನಾನು ಮೊದಲ ಬಾರಿಗೆ ಕ್ಯಾಮೆರಾವನ್ನು ಎದುರಿಸಿದ್ದೆ. ಜೊತೆಗೆ ನಾನು ನಿಮ್ಮೆಲ್ಲರಿಗೂ ಪರಿಚಯವಾದೆ. ಈ ಸ್ಮರಣೀಯ ದಿನದಂದು ನಾನು ನನ್ನ ಮಗನನ್ನು ಎಲ್ಲರಿಗೂ ಪರಿಚಯಿಸಲು ಬಯಸುತ್ತೇನೆ. ನಮ್ಮ ಪುಟ್ಟ ಹೃದಯ, ನಮ್ಮ ಜೀವನಕ್ಕೆ ಅನಂತ ಸಂತೋಷವನ್ನು ತಂದಿದೆ. ನಮ್ಮ ಕೊಡವ ಯೋಧ ಜಿಯಾನ್ ಅಯ್ಯಪ್ಪ ” ಎಂದು ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಈ ಜಗತ್ತಿಗೆ ನಮ್ಮ ಮಗುವಿನ ಮೊದಲ ಫೋಟೋ ಇದಾಗಿದೆ. ನನ್ನ ಮಗನಿಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಗನ ಫೋಟೋ ಕ್ಲಿಕ್ಕಿಸಿದ್ದಕ್ಕೆ ಫೋಟ್ರೋಗ್ರಾಫರ್ ಗೆ ಧನ್ಯವಾದ ತಿಳಿಸಿದ್ದಾರೆ.
ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದರು.
