– ವಿದ್ಯಾಭ್ಯಾಸ ಮುಂದುವರಿಸಲು ಹುಟ್ಟೂರಿನಿಂದ ಬಂದಿದ್ರು
– ನೇಣು ಬಿಗಿದುಕೊಂಡು ಕಿರುತೆರೆ ನಟಿ ಸೂಸೈಡ್
ಕೋಲ್ಕತ್ತಾ: ಸೀರಿಯಲ್‍ನಲ್ಲಿ ಪ್ರಮುಖ ಪಾತ್ರ ಸಿಕ್ಕಿಲ್ಲವೆಂದು ಬಂಗಾಳಿ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್‍ನಲ್ಲಿ ನಡೆದಿದೆ.
ಸುಬರ್ನಾ ಜಾಶ್ (23) ಆತ್ಮಹತ್ಯೆ ಮಾಡಿಕೊಂಡ ನಟಿ. ಭಾನುವಾರ ರಾತ್ರಿ ಪೋಷಕರು ಸುಬರ್ನಾ ಜಾಶ್ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ನಟಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ನಟಿಯ ದೇಹವನ್ನು ಸೋಮವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಟಿ ಸುಬರ್ನಾ ಜಾಶ್ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯ ಬಾರಿಗೆ ‘ಮಯೂರ್ ಪಾಂಖಿ’ ಧಾರಾವಾಹಿಯಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮೂಲತಃ ಬುರ್ದ್ವಾನ್ ಮೂಲದ ಸುಬರ್ನಾ ವಿದ್ಯಾಭ್ಯಾಸವನ್ನು ಮುಂದುವರಿಸಲು ಕೋಲ್ಕತ್ತಾಗೆ ಬಂದಿದ್ದರು. ಆದರೆ ಸುಬರ್ನಾ ಜಾಶ್‍ಗೆ ನಟಿಯಾಗಬೇಕೆಂಬ ಕನಸಿತ್ತು. ಕೊನೆಗೆ ತನ್ನ ವೃತ್ತಿಜೀವನಕ್ಕಾಗಿ ಕೋಲ್ಕತ್ತಾದಲ್ಲಿಯೇ ವಾಸಿಸುತ್ತಿದ್ದರು. ಅದರಂತೆಯೇ ಅನೇಕ ಆಡಿಷನ್‍ಗಳಿಗೆ ಹೋಗುತ್ತಿದ್ದರು. ನಂತರ ಕೆಲವು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಸಹ ಪಡೆದಿದ್ದರು.
ಧಾರಾವಾಹಿಯಲ್ಲಿ ಮುಖ್ಯಪಾತ್ರಗಳು ಸಿಗದೆ ಇದ್ದ ಕಾರಣ ಸುಬರ್ನಾ ಜಾಶ್ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆ ತನ್ನ ಹುಟ್ಟೂರಿಗೆ ವಾಪಸ್ ಹೋಗಿದ್ದರು ಎಂದು ವರದಿಯಾಗಿದೆ. ಆದರೆ ನಟಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಬರ್ನಾ ಜಾಶ್ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.
ಇತ್ತೀಚೆಗೆ ಮುಂಬೈ ಮೂಲದ ಕಿರುತೆರೆ ನಟಿ ಸೆಜಲ್ ಶರ್ಮಾ ಸಹ ಆತ್ಮಹತ್ಯೆಗೆ ಶರಣಾಗಿದ್ದರು.