ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ಅವರಿಂದು ವಿಧಿವಶವಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ʻಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು’ ಎನ್ನುವಂತೆ ಸರೋಜಾ ದೇವಿ ಅವರು ನೇತ್ರದಾನ (Eye Donate) ಮಾಡಿದ್ದಾರೆ.
ಬೆಂಗಳೂರಿನ (Bengaluru) ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅದರಂತೆ ಇಂದು ಸರೋಜಾದೇವಿ ಅವರ ಕಣ್ಣುಗಳನ್ನು ಪಡೆಯಲಾಗುತ್ತಿದೆ. ವೈದ್ಯರ ತಂಡ ಮಲ್ಲೇಶ್ವರಂನಲ್ಲಿರುವ ಮೆನೆಗೆ ಆಗಮಿಸಿದ್ದು, ನೇತ್ರದಾನ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗುತ್ತಿದೆ. ನೇತ್ರದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ದರ್ಶನ ಮತ್ತೆ ನಡೆಯಲಿದೆ. ಇದನ್ನೂ ಓದಿ: ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ
ಕನ್ನಡ ವರನಟ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ನೇತ್ರದಾನ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಅಂಧರಿಗೆ ಅಳವಡಿಸಲಾಗಿದೆ. ಆ ಮೂಲಕ ಇಬ್ಬರ ಬಾಳಿಗೆ ಪುನೀತ್ ರಾಜ್‌ಕುಮಾರ್ ಬೆಳಕಾಗಿದ್ದಾರೆ. ಇದೀಗ ರಾಜ್‌ಕುಮಾರ್, ಪುನೀತ್ ಅವರ ಹಾದಿಯಾಗಿ ಸರೋಜಾದೇವಿ ಅವರೂ ನೇತ್ರದಾನ ಮಾಡಿದ್ದು, ಬದುಕಿನ ಪಯಣ ಮುಗಿಸಿದ್ದಾರೆ. ಇದನ್ನೂ ಓದಿ: ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್, ಖುಷ್ಬು
ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ