ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ನಗರದ ಪ್ರಸಿದ್ಧಿ ಚಿಟ್ ಫಂಡ್ ಸುಮಾರು 28 ಲಕ್ಷ ರೂ. ಹಣವನ್ನು ವಂಚನೆ ಮಾಡಿದ್ದು, ಈ ಸಂಬಂಧ ಸಂಜನಾ ನಗರದ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಚಿಟ್ ಫಂಡ್ ಮಾಲೀಕ ಮತ್ತು ಆತನ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಜನಾ ಕಳೆದೆರಡು ವರ್ಷಗಳಿಂದ ಮಲ್ಲೇಶ್ವರಂನಲ್ಲಿರುವ ಮಹೇಶ್ ಎಂಬ ವ್ಯಕ್ತಿಯ ಮಾಲೀಕತ್ವದ ಪ್ರಸಿದ್ಧಿ ಚಿಟ್ ಫಂಡ್ ನಲ್ಲಿ ಸುಮಾರು 28 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆದರೆ ಮಹೇಶ್ ಎರಡು ತಿಂಗಳಿನಿಂದ ಚಿಟ್ ಫಂಡ್ ಕಚೇರಿಯನ್ನು ಮುಚ್ಚಿಕೊಂಡು ನಾಪತ್ತೆಯಾಗಿದ್ದಾನೆ.
ನಟಿ ಸಂಜನಾ ಸೇರಿ ಸುಮಾರು 50 ಜನರಿಗೆ 18 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇಂದು ನಟಿ ಸಂಜನಾ ಮತ್ತು ವಂಚನೆಗೊಳಗಾದವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಚಿಟ್ ಫಂಡ್ ಮಾಲೀಕ ಮಹೇಶ್ ಮತ್ತು ಪತ್ನಿ ನಿರೂಪಾ ಮಹೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಸಂಜನಾ ಸಹಕಾರ ಜಂಟಿ ನಿಬಂಧಕರಿಗೂ ದೂರು ನೀಡಿದ್ದು, ಹಣ ವಾಪಾಸ್ಸು ಕೊಡಿಸುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕ ಹೆಚ್ ಬಾಲಶೇಖರ್‍ಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಸುಮಾರು 30 ಕ್ಕೂ ಹೆಚ್ಚು ಜನರಿಂದ ಸಹಕಾರ ಸಂಘದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.