ಶಿಮ್ಲಾದ ಸುಂದರಿ ರೂಪಾಲಿ ಸೂದ್ ವೆಂಕ್ಯಾ ಸಿನಿಮಾದ ಮೂಲಕ ಕನ್ನಡಕ್ಕೆ ಬಂದಿರುವ ವಿಚಾರ ಗೊತ್ತೇ ಇದೆ. ಪವನ್ ಒಡೆಯರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ವೆಂಕ್ಯಾ ಸಿನಿಮಾದಲ್ಲಿ ಈಕೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಉತ್ತರ ಕರ್ನಾಟಕ ಹಿನ್ನೆಲೆಯ ಸಿನಿಮಾ ಇದಾಗಿದ್ದರೂ, ಈ ಚಿತ್ರದ ರೂಪಾಯಿ ಹಿಮಾಚಲದ ಪಹಾಡಿ ಹುಡುಗಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.
ಮೂಲತಃ ಶಿಮ್ಲಾದವರಾದ ರೂಪಾಲಿ ಕಾಲೇಜು ದಿನಗಳಲ್ಲಿದ್ದಾಗಲೇ ಮಾಡೆಲಿಂಗ್ ಅಖಾಡಕ್ಕೆ ಇಳಿದಿದ್ದರು. ಮಾಡೆಲಿಂಗ್ ಜೊತೆ ಜೊತೆಯಲಿ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸಿರುವ ಈ ಶಿಮ್ಲಾ ಚೆಲುವೆ, ಹಾರ್ಡಿ ಸಂಧು ಅವರೊಂದಿಗಿನ ಸೂಪರ್ ಹಿಟ್ ಹಾಡು ‘ಹಾರ್ನ್ ಬ್ಲೋ’ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ‘ವೆಂಕ್ಯಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರೂಪಾಲಿ ಈಗಾಗಲೇ ‘ವೆಂಕ್ಯಾ’ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅವರು ಹಿಮಾಚಲದ ಪಹಾಡಿ ಹುಡುಗಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಅನುಭವ ಹಂಚಿಕೊಂಡಿರುವ ರೂಪಾಲಿ, ‘ನಾವು ಇತ್ತೀಚೆಗೆ ಮನಾಲಿಯ ಮುಂದೆ ಕೈಲಾಂಗ್ನಲ್ಲಿ, ಪರ್ವತಗಳ ನಡುವೆ ಸುಂದರವಾದ ಸ್ಥಳದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆ ಅದ್ಭುತ ಆರಂಭ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
‘ಡೊಳ್ಳು’ ಸಿನಿಮಾ ನಿರ್ಮಾಣ ಮಾಡಿದ್ದ ಪವನ್ ಒಡೆಯರ್ ವೆಂಕ್ಯಾನಿಗೂ ಸಾಥ್ ಕೊಟ್ಟಿದ್ದಾರೆ. ಒಡೆಯರ್ ಫಿಲ್ಮ್ಸ್ ನಡಿ ತಯಾರಾಗ್ತಿರುವ ಈ ಚಿತ್ರಕ್ಕೆ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಕೂಡ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕವನ್ನು ಕಥೆ ಆಧಾರಿಸಿ ಮೂಡಿ ಬರುತ್ತಿರುವ ‘ವೆಂಕ್ಯಾ’ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀನಿಧಿ ಡಿಎಸ್ ಬರೆದಿದ್ದಾರೆ, ಪ್ರಣವ್ ಮುಲೆ ಅವರ ಛಾಯಾಗ್ರಹಣ ಮತ್ತು ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ (Sagar Puranik) ಈ ಸಿನಿಮಾಗೆ ನಿರ್ದೇಶಕ ಕಂ ಹೀರೋ.