ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಮಾತನಾಡಲು ಚಡಪಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ಸಾಲುಮರದ ತಿಮ್ಮಕ್ಕ ತಮಿಳಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾರೆ. ಈ ವೇಳೆ ತಿಮ್ಮಕ್ಕ ಅವರಿಗೆ ಮಾತನಾಡಲು ಹೇಳಿದಾಗ ಅವರು ಕನ್ನಡದಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಆದರೆ ಅಲ್ಲಿದ್ದ ತಮಿಳುಗರಿಗೆ ಕನ್ನಡ ಅರ್ಥವಾಗಲಿಲ್ಲ. ಹಾಗಾಗಿ ಕಾರ್ಯಕ್ರಮದ ನಿರೂಪಕರು ಕನ್ನಡತಿ ರಶ್ಮಿಕಾ ಅವರನ್ನು ವೇದಿಕೆ ಮೇಲೆ ಕರೆದು ತಿಮ್ಮಕ್ಕ ಅವರ ಮಾತುಗಳನ್ನು ಅನುವಾದ ಮಾಡಿ ಎಂದು ಹೇಳುತ್ತಾರೆ.
ನಿರೂಪಕರು ಕರೆದ ತಕ್ಷಣ ರಶ್ಮಿಕಾ ವೇದಿಕೆ ಮೇಲೆ ಬಂದು ತಿಮ್ಮಕ್ಕ ಅವರ ಆಶೀರ್ವಾದ ಪಡೆಯುತ್ತಾರೆ. ಬಳಿಕ ಅವರ ಬಗ್ಗೆ ಇಂಗ್ಲಿಷ್‍ನಲ್ಲಿ ಎರಡು ಸಾಲುಗಳನ್ನು ಹೇಳುತ್ತಾರೆ. ಆ ನಂತರದಲ್ಲಿ ಅವರ ಬಗ್ಗೆ ಮಾತನಾಡಲು ಚಡಪಡಿಸುತ್ತಾರೆ. ರಶ್ಮಿಕಾ ಹಾಗೂ ತಿಮ್ಮಕ್ಕ ಅವರ ಜೊತೆ ವೇದಿಕೆ ಮೇಲೆ ನಟ ವಿವೇಕ್ ಕೂಡ ಇದ್ದರು. ರಶ್ಮಿಕಾ ಚಡಪಡಿಸುತ್ತಿರುವುದನ್ನು ಗಮನಿಸಿದ ವಿವೇಕ್ ಸ್ವತಃ ತಾವೇ ತಿಮ್ಮಕ್ಕ ಅವರ ಬಗ್ಗೆ ತಮಿಳಿನಲ್ಲಿ ಹೇಳುತ್ತಾರೆ.
ರಶ್ಮಿಕಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ರಶ್ಮಿಕಾ ಅವರನ್ನು ತರಾಟೆಗೆ ತೆಗೆದುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ತಮಿಳು ನಟ ವಿವೇಕ್‍ಗೆ ಗೊತ್ತಿರುವಷ್ಟು ಕನ್ನಡದ ಅರ್ಥ ಒಬ್ಬ ಕನ್ನಡದಿಂದ ಹೋಗಿರುವ ರಶ್ಮಿಕಾ ಮಂದಣ್ಣರಿಗೆ ಗೊತ್ತಿಲ್ಲವೆಂದರೆ ಅವರು ಹುಟ್ಟಿರುವುದೇ ವೇಸ್ಟ್ ಹಾಗೂ ಅವರು ಇಲ್ಲಿ ಜೀವಿಸುವುದು ಕೂಡ ವೇಸ್ಟ್ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.