‘ಓ ಏ ಲಡ್ಕಿ’ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ರಾಗಿಣಿ

Public TV
2 Min Read
OY YEAH LADK 1

ತ್ತೀಚಿನ ದಿನಗಳಲ್ಲಿ ಆಲ್ಬಂ ಸಾಂಗ್ ಹೆಚ್ಚು ಜನಪ್ರಿಯವಾಗುತ್ತಿದೆ. ಅಧೀರ ಸಂತು  ಅವರು ಬಾಲಿವುಡ್  ಸ್ಟೈಲ್ ನಲ್ಲಿ  ಕನ್ನಡ ಆಲ್ಬಂ ಸಾಂಗ್ ಮಾಡಿದ್ದಾರೆ. ಅದರ ಹೆಸರು ಕೂಡ ವಿಭಿನ್ನವಾಗಿದೆ. ತುಂಬಾ ಸ್ಟೈಲಿಶ್ ಆಗಿ ಮೂಡಿಬಂದಿರುವ ‘ಓ ಏ ಲಡ್ಕಿ’ (OY YEAH LADK) ಎಂಬ ಕ್ಯಾಚಿ ಟೈಟಲ್ ಹೊಂದಿರೋ  ಈ ಹಾಡನ್ನು ನಟಿ ರಾಗಿಣಿ ದ್ವಿವೇದಿ (Ragani) ಅವರು  ಬಿಡುಗಡೆ ಮಾಡಿದರು.  ವಿಶೇಷವಾಗಿ ಈ ಹಾಡಲ್ಲಿ ಉಗ್ರಂ ರವಿ ಖಳನಾಯಕನಾಗಿ ನಟಿಸಿದ್ದಾರೆ. ಎನ್ನಾರೈ ಯುವತಿಯಾಗಿ ಅಮೃತ, ಡಿಲವರಿ ಬಾಯ್ ಆಗಿ  ಸಮೀರ್ ನಗರದ್ ಅಭಿನಯಿಸಿದ್ದಾರೆ. ಈ ಹಾಡಿನ ಜೊತೆಗೆ  ಇದರ ಲಿರಿಕಲ್ ವಿಡಿಯೋ ಹಾಗೂ ರೀಮಿಕ್ಸ್ ವರ್ಷನ್ ಪ್ರದರ್ಶಿಸಲಾಯಿತು. ನಿರ್ದೇಶಕ ಅಧೀರ ಸಂತು ಅವರೇ ಈ ಹಾಡಿನ ಸಾಹಿತ್ಯ ರಚಿಸಿ, ತಾವೇ ನಂತರ ಹಾಡಿದ್ದಾರೆ. ಆಕಾಶ್ ಆಡಿಯೋ ಮೂಲಕ ‘ಓ ಏ ಲಡ್ಕಿ’ ಹಾಡು ಬಿಡುಗಡೆಯಾಗಿದೆ.

OY YEAH LADK 2

ಈ ಹಾಡಲ್ಲಿ ಸಾಮಾನ್ಯ  ಡೆಲಿವರಿ ಬಾಯ್ ಒಬ್ಬ ತನ್ನ ನೃತ್ಯ ಪ್ರತಿಭೆಯ ಮೂಲಕ  ಎನ್.ಆರ್.ಐ. ಹುಡುಗಿಯನ್ನು ಹೇಗೆ  ಪಟಾಯಿಸಿದ  ಎಂಬುದನ್ನು ಹೇಳಲಾಗಿದೆ.  ಆ ಡೆಲಿವರಿ ಬಾಯ್ ಒಮ್ಮೆ ಖಳನಾಯಕನಿಗೆ ಡೆಲಿವರಿ ಕೊಡಲು ಬಂದು, ವಾಪಸ್ ಹೋಗುವಾಗ ಖಳನಾಯಕನ ಕಾ‌ರಿನಲ್ಲಿ ಕುಳಿತ ಓರ್ವ ಸುಂದರ NRI ಯುವತಿಯನ್ನ ನೋಡುತ್ತಾ ಮೈಮರೆಯುತ್ತಾನೆ. ಅದನ್ನ ಕಂಡ ಖಳನಾಯಕ ಆತನನ್ನ ಗದರಿ ಅವನ ಬಗ್ಗೆ ಕೀಳಾಗಿ ಮಾತಾಡುತ್ತಾನೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ನಾಯಕ, 5 ನಿಮಿಷದಲ್ಲಿ ಆ  ಯುವತಿ ತನ್ನತ್ತ ಓಡಿ ಬರೋಹಾಗೆ ಮಾಡ್ತಿನಿ ಅಂತ ಸವಾಲ್ ಹಾಕಿ, ತನ್ನ ಆಪದ್ಬಾಂಧವನಿಗೆ (ನಿರ್ದೇಶಕ) ಕರೆ ಮಾಡಿ ಸಹಾಯ ಕೋರುತ್ತಾನೆ. ರಾಕ್‌ಸ್ಟಾರ್ ಆಗಿಬಂದ ಡೆಲಿವರಿ ಬಾಯ್‌, ಕನ್ನಡ ನೆಲ, ಭಾಷೆಯ ತಾಕತ್ತನ್ನ ಹಾಡಿನ ಮೂಲಕ ಹೇಳಿ ಆ ಯುವತಿಯ  ಮನಸನ್ನು ಗೆಲ್ಲುತ್ತಾನೆ. ಎಂಎಸ್. ತ್ಯಾಗರಾಜ್ ಈ ಹಾಡಿಗೆ ಮ್ಯೂಸಿಕ್ ಮಾಡಿದ್ದು, ಎಸ್. ಹಾಲೇಶ್ ಇದನ್ನು ಸೆರೆ ಹಿಡಿದಿದ್ದಾರೆ.

OY YEAH LADK 3

ಈ ವಿಶೇಷ ಹಾಡಿನ  ಕುರಿತಂತೆ  ಮಾತನಾಡಿದ ನಿರ್ಮಾಪಕ, ನಿರ್ದೇಶಕ  ಅಧೀರ ಸಂತು, ನಾನು ಇಂಡಸ್ಟ್ರಿಗೆ ಹೊಸಬನೇನಲ್ಲ, ಉಪ್ಪಿ ಅವರ ಐವತ್ತನೇ ಚಿತ್ರವನ್ನು ನಾನೇ ಮಾಡಬೇಕಿತ್ತು. ಅವರು ಕಥೆ ಕೇಳಿ ಒಪ್ಪಿ ಡೇಟ್ಸ್ ಕೂಡ ಕೊಟ್ಟಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಡ್ರಾಪ್ ಆಯ್ತು. ಸ್ನೇಹಿತರ ಸಹಕಾರದಿಂದ ಈ ಸಾಂಗ್ ನಿರ್ದೇಶನ ಮಾಡಿದ್ದೇನೆ. ನಟಿ ರಾಗಿಣಿ ಅವರನ್ನೇ ಇನ್‌ಸ್ಪೈರ್ ಆಗಿ ತೆಗೆದುಕೊಂಡು ಮಾಡಿದ ಹಾಡಿದು. ಅವರು ಬ್ಯುಸಿ ಇದ್ದದ್ದರಿಂದ ಬೇರೆಯವರ ಕೈಲಿ ಮಾಡಿಸಬೇಕಾಯ್ತು. ಮುಂದೆ ಅವರನ್ನು ಇಟ್ಟುಕೊಂಡು ಇಂಟರ್ ನ್ಯಾಷನಲ್ ಲೆವೆಲ್ ಸಾಂಗ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

 

ನಟಿ ರಾಗಿಣಿ ಮಾತನಾಡುತ್ತ, ಸಂತು ನನಗೆ ಬಹಳ ದಿನಗಳಿಂದ ಪರಿಚಯ. ಹಾಡು ತುಂಬಾ ಚೆನ್ನಾಗಿ ಬಂದಿದೆ. ಸಂತು ಅವರ ವಿಜನ್ ತೆರೆಯ ಮೇಲೆ ಕಾಣುತ್ತಿದೆ. ಒಳ್ಳೊಳ್ಳೆ ಲೊಕೇಶನ್ ಗಳಲ್ಲಿ ಹಾಡನ್ನು ಶೂಟ್ ಮಾಡಿದ್ದಾರೆ. ನನಗೂ ಅವರ ಜೊತೆ ಕೆಲಸ ಮಾಡಬೇಕೆಂದು ತುಂಬಾ ಆಸಕ್ತಿಯಿದೆ ಎಂದು ಹೇಳಿದರು. ನಂತರ ಉಗ್ರಂ ರವಿ ಮಾತನಾಡಿ ವಿಲನ್ ಆಗಿದ್ದ ನಾನು ಮೊದಲಬಾರಿಗೆ ಇಂಥ ಹಾಡಲ್ಲಿ ಕಾಣಿಸಿಕೊಂಡಿದ್ದೇನೆ. ಇದರ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಸಂತುಗೆ ಮುಂದೆ ಒಳ್ಳೇ ಫ್ಯೂಚರ್ ಇದೆ ಎಂದು ಹೇಳಿದರು. ಮತ್ತೊಬ್ಬ ಅತಿಥಿಯಾಗಿ ಸುನಿಲ್ ಕಂಬಾರ್ ವೇದಿಕೆಯಲ್ಲಿದ್ದರು. ನಾಯಕ ಸಮೀರ್, ನಾಯಕಿ ಅಮೃತ ಕೂಡ ತಮ್ಮ ಪರಿಚಯ ಮಾಡಿಕೊಂಡರು.

Share This Article