ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಅಪಾಯವಿದೆ ಎಚ್ಚರಿಕೆ’ (Apaayavide Eccharike) ಚಿತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಟ್ರೈಲರ್ ಮೂಲಕ ಗಾಢ ಕುತೂಹಲ ಹುಟ್ಟು ಹಾಕಿರುವ ಈ ಸಿನಿಮಾ ಹಾರರ್ ಥ್ರಿಲ್ಲರ್ ಜಾನರಿನ ಸಿದ್ಧಸೂತ್ರಗಳಾಚೆಗೆ ರೂಪುಗೊಂಡಿದೆ ಎಂಬ ವಿಚಾರವನ್ನೂ ಟ್ರೈಲರ್ ಮನದಟ್ಟು ಮಾಡಿಸಿದೆ. ನಿರ್ದೇಶಕರಿಲ್ಲಿ ಪಂಚ ಭೂತಗಳ ಆಧಾರದಲ್ಲಿ ಸೃಷ್ಟಿದ ಪಾತ್ರಗಳ ಬಗ್ಗೆಯೂ ಈಗ ಚರ್ಚೆಗಳು ನಡೆಯುತ್ತಿವೆ. ‘ಅಪಾಯವಿದೆ ಎಚ್ಚರಿಕೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವವರು ರಾಧಾ ಭಗವತಿ. ’ರಾಮಾಚಾರಿ’ ಸೀರಿಯಲ್‌ನ ತಂಗಿ ಪಾತ್ರದ ಮೂಲಕ ಮನಗೆದ್ದಿದ್ದ ರಾಧಾ ಭಗವತಿ (Radha Bhagavati) ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಒಂದಷ್ಟು ಬೆರಗಿನ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
Advertisement
ರಾಧಾ ಭಗವತಿ ಇದೀಗ ಕಿರುತೆರೆಯಲ್ಲಿಯೂ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇದೀಗ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯ ನಾಯಕಿಯಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಸೀರಿಯಲ್‌ಗಳಲ್ಲಿ ನಟಿಸುತ್ತಲೇ ನಾಯಕಿಯಾಗಿ ಹಿರಿತೆರೆಗೆ ಆಗಮಿಸಿದ್ದ ರಾಧಾ ಪಾಲಿಗೆ ‘ಅಪಾಯವಿದೆ ಎಚ್ಚರಿಕೆ’ ಮಹತ್ವದ ಚಿತ್ರ. ಸ್ನೇಹಿತರೊಬ್ಬರ ಮೂಲಕ ಈ ಚಿತ್ರಕ್ಕಾಗಿ ಆಡಿಷನ್ ನಡೆಯುತ್ತಿರುವ ವಿಚಾರ ತಿಳಿದು ನಿರ್ದೇಶಕರನ್ನು ಸಂಪರ್ಕಿಸಿದ್ದವರು ರಾಧಾ ಭಗವತಿ. ಆ ನಂತರ ಆಡಿಷನ್ ಅಲ್ಲಿ ಪಾಲ್ಗೊಂಡು, ನಾಯಕಿಯಾಗಿ ಆಯ್ಕೆಯಾದ ಅವರಿಗೆ ನಿರ್ದೇಶಕರು ತಿಂಗಳುಗಟ್ಟಲೆ ಆ ಪಾತ್ರಕ್ಕಾಗಿ ರಿಹರ್ಸಲ್ ನಡೆಸಿದ್ದರಂತೆ. ಇದನ್ನೂ ಓದಿ:6.5 ಲಕ್ಷ ಕೊಡದೇ ವಂಚಿಸಿದ ಆರೋಪ- ನವನಿರ್ದೇಶಕಿ ವಿರುದ್ಧ ದೂರು
Advertisement
Advertisement
ಹಾಗೆ ಆ ಪಾತ್ರವನ್ನು ಒಳಗಿಳಿಸಿಕೊಂಡಿದ್ದ ರಾಧಾ ಚಿತ್ರೀಕರಣದಲ್ಲಿ ಪಾಲ್ಗೊಂಡು ವಿಶಿಷ್ಟವಾದ ಅನುಭವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೆಚ್ಚಾಗಿ ಕಾಡಿನ ಕತ್ತಲಲ್ಲಿ ಘಟಿಸುವ ಈ ಕಥೆ ಕೇಳಿಯೇ ರಾಧಾ ಥ್ರಿಲ್ ಆಗಿದ್ದರಂತೆ. ಆದರೆ, ಅವರ ಪಾಲಿಗಿಲ್ಲಿ ನಾಯಕಿಯಾಗಿ ಸಿಟಿ ಹುಡುಗಿಯ ಪಾತ್ರ ಸಿಕ್ಕಿದೆ. ಒಂದಷ್ಟು ದಿನಗಳ ಕಾಲ ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗಿಯಾದ ಖುಷಿ ಅವರಲ್ಲಿದೆ. ಹಾಗಾದರೆ, ರಾಧಾ ಪಾತ್ರ ಸಿಟಿ ಪೋಷನ್ನಿಗೆ ಮಾತ್ರವೇ ಸೀಮಿತವಾ? ಆ ಪಾತ್ರ ಕಾಡಿನ ಗರ್ಭದೊಳಗೆ ಪ್ರವೇಶಿಸೋದಿಲ್ಲವಾ? ಇಂಥಾ ಕುತೂಹಲ ಸಹಜ. ಅದನ್ನು ಸದ್ಯಕ್ಕೆ ಚಿತ್ರತಂಡ ಗೌಪ್ಯವಾಗಿಟ್ಟಿದೆ. ಅದೀಗ ಪ್ರೇಕ್ಷಕರ ಮುಂದೆ ತೆರೆದುಕೊಂಡಿದೆ. ರಾಮಾಚಾರಿಯ ತಂಗಿಯನ್ನು ವಿಶಿಷ್ಟವಾದ ಪಾತ್ರದಲ್ಲಿ ಕಣ್ತುಂಬಿಕೊಂಡ ಪ್ರೇಕ್ಷಕರು ಖುಷಿಗೊಂಡಿದ್ದಾರೆ.
Advertisement
ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ವರ್ಷಗಟ್ಟಲೆ ಶ್ರಮ ವಹಿಸಿ ಈ ಕಥೆಯನ್ನು ಸಿದ್ಧಪಡಿಸಿದ್ದಾರೆ. ನಂತರ ಅಷ್ಟೇ ಶ್ರದ್ಧೆಯಿಂದ ಎಲ್ಲ ರೀತಿಯಿಂದಲೂ ಆಯಾ ಪಾತ್ರಕ್ಕೆ ಒಪ್ಪುವಂಥಾ ನಟ- ನಟಿಯರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಪಾತ್ರಗಳ ಬಗ್ಗೆ ತಿಳಿ ಹೇಳಿ, ತಿಂಗಳುಗಟ್ಟಲೆ ರಿಹರ್ಸಲ್ ನಡೆಸಿ ಚಿತ್ರೀಕರಣ ಚಾಲೂ ಮಾಡಿದ್ದಾರೆ. ಒಟ್ಟಾರೆಯಾಗಿ ಸೀರಿಯಲ್ ಹುಡುಗಿ ರಾಧಾ ಭಗವತಿಗಿಲ್ಲಿ ಚೆಂದದ ಪಾತ್ರ ಸಿಕ್ಕ ಸಂಭ್ರಮವಿದೆ. ಇದೀಗ ಈ ಸಿನಿಮಾ ಬಿಡುಗಡೆಗೊಂಡು ಪ್ರೇಕ್ಷಕರನ್ನು ಥ್ರಿಲ್ ಆಗಿಸುತ್ತಾ ಯಶಸ್ವಿ ಪ್ರದರ್ಶನ ನೀಡುತ್ತಿದೆ.
ಯಶಸ್ವಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ವಿ.ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ. ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣದೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.