ಬೆಂಗಳೂರು: ಕೇವಲ ಒಂದೂವರೆ ವರ್ಷಗಳ ಹಿಂದಷ್ಟೇ ಒಟ್ಟೊಟ್ಟಿಗೇ ಮೂರು ಸಿನಿಮಾ ಶುರು ಮಾಡಿದ್ದರು ಪೂಜಾ ಗಾಂಧಿ… ಎಲ್ಲಿಂದಲೋ ಬಂದು, ಕರ್ನಾಟಕದಲ್ಲಿ ನೆಲೆನಿಂತು, ಸಿನಿಮಾಗಳಲ್ಲಿ ನಟಿಸುತ್ತಲೇ ಕೆಲವಾರು ಉದ್ಯಮಗಳನ್ನೂ ಆರಂಭಿಸಿದರು. ಇವೆಲ್ಲದರ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ನಿರ್ಮಾಪಕಿಯಾಗಿ ಅದಾಗಲೇ ಒಂದು ಸಿನಿಮಾವನ್ನು ನಿರ್ಮಿಸಿದ್ದ ಪೂಜಾ ಆಗ ಸಿನಿಮಾ ಫ್ಯಾಕ್ಟರಿಯನ್ನೇ ಆರಂಭಿಸಿದ್ದರು.
ಹತ್ತು ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಕನ್ನಡ ಚಿತ್ರರಂಗದ ದಿಗಂತದಲ್ಲಿ ಉದಯಿಸಿದ ತಾರೆ ಪೂಜಾ ಗಾಂಧಿ. `ಮುಂಗಾರು ಮಳೆ’ ಚಿತ್ರ ಹೇಗೆ ನಾಯಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ಟರ ಅದೃಷ್ಟದ ಬಾಗಿಲನ್ನು ತೆರೆಸಿತೋ ಅದೇ ರೀತಿ ಪಂಜಾಬಿನಿಂದ ಬಂದ ನಾಯಕಿ ಪೂಜಾ ಗಾಂಧಿಗೂ ಅದೃಷ್ಟ ಖುಲಾಯಿಸಿತು. ಆದರೆ `ಮುಂಗಾರು ಮಳೆ’ ಚಿತ್ರ ಬಿಡುಗಡೆಯಾದಾಗ ಪೂಜಾ ಗಾಂಧಿ ಬಗ್ಗೆ ಗಾಂಧಿನಗರದ ಜನರಿಗೆ ಒಂದಿಷ್ಟು ಅಲರ್ಜಿ ಇತ್ತು. ಆಕೆ ಕುಳ್ಳಿ ಎಂದರು ಕೆಲವರು. ಆಕೆಯದ್ದು `ಮ್ಯಾನ್ಲಿ ಲುಕ್’ ಎಂದು ಕೆಲವರು ಹೀಯಾಳಿಸಿದರು. ಮತ್ತೆ ಕೆಲವರು `ಆಕೆಗೆ ನಟನೆ ಅಷ್ಟೇನು ಬರೋಲ್ಲ’ ಎಂದರು. ಅಷ್ಟೇ ಏಕೆ, `ಮುಂಗಾರು ಮಳೆ’ ಚಿತ್ರದಲ್ಲಿ ಪೂಜಾ ಗಾಂಧಿಯ ಬದಲು ನಾಯಕಿಯಾಗಿ ರಮ್ಯಾ ಇದ್ದಿದ್ದರೆ ಆ ಚಿತ್ರದ ಖದರೇ ಬೇರೆಯಾಗುತ್ತಿತ್ತು ಎಂದು ಹಲವರು ಭವಿಷ್ಯವನ್ನು ನುಡಿದಿದ್ದರು. ಇವೆಲ್ಲ ಟೀಕೆಗಳನ್ನು ನೋಡಿ ಈ ಪಂಜಾಬಿ ಹುಡುಗಿ ಒಂದೇ ಚಿತ್ರಕ್ಕೆ ವಾಪಸ್ ಹೋಗುತ್ತಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಯಾವಾಗ ಬಾಕ್ಸ್ ಆಫೀಸ್‍ನಲ್ಲಿ `ಮುಂಗಾರು ಮಳೆ’ ಹಿಟ್ ಆಯಿತೋ ಆಗ ಪೂಜಾಳನ್ನು ಟೀಕೆ ಮಾಡಿದ್ದ ಅದೇ ಗಾಂಧಿನಗರದ ಜನ ಆಕೆಯ ಕಾಲ್‍ಶೀಟ್ ಗಾಗಿ ಆಕೆ ಸುತ್ತ ಗಿರಕಿ ಹೊಡೆಯಲಾರಂಭಿಸಿದರು.
Advertisement
Advertisement
ಎಷ್ಟಾದರೂ ಗೆದ್ದೆತ್ತಿನ ಬಾಲ ಹಿಡಿಯುವುದು ನಮ್ಮವರ ಸಹಜ ಗುಣ ತಾನೆ? ಹೌದು, ಪೂಜಾ ಗಾಂಧಿ ಲೈಮ್ ಲೈಟಿಗೆ ಬಂದಿದ್ದೇ ತಡ, ಆಕೆ ಮಾಲಾಶ್ರೀಯನ್ನು ನೆನಪಿಸುವ ರೀತಿಯಲ್ಲಿ ಶೈನ್ ಆಗುತ್ತಾಳೋ ಎಂದೆನಿಸಲು ಆರಂಭವಾಯಿತು. ಏಕೆಂದರೆ ಗಾಂಧಿನಗರದ ಬಹುತೇಕ ಎಲ್ಲಾ ನಿರ್ಮಾಪಕರು ಮತ್ತು ನಿರ್ದೇಶಕರು `ಪೂಜಾ ಮಂತ್ರ’ ಪಠಿಸಲು ಆರಂಭಿಸಿದ್ದರು.
Advertisement
ಪೂಜಾಳ ಯಶಸ್ಸು ಮತ್ತು ನಾಗಾಲೋಟಕ್ಕೆ ಹಲವಾರು ಕಾರಣಗಳು ಇದ್ದವು. ಮೊದಲನೆಯದಾಗಿ, ಈ ಪಂಜಾಬಿ ಹುಡುಗಿ ಮೊದಲ ದಿನದಿಂದಲೇ ತೊದಲು ಕನ್ನಡ ನುಡಿಗಳನ್ನು ಮಾತನಾಡುತ್ತಾ ಕನ್ನಡಿಗರ ಮೆಚ್ಚುಗೆಗೆ ಪಾತ್ರಳಾದಳು. ಹಾಗೆಯೇ ನಮ್ಮ ಕನ್ನಡದ ಹುಡುಗಿಯರ ತರಹ ಬಿಂಕ-ವೈಯ್ಯಾರ ತೋರಿಸದೇ ನಿರ್ಮಾಪಕ ಕೊಟ್ಟಿದ್ದನ್ನು ಪಡೆದದ್ದೂ ಆಕೆಯ ಸುತ್ತ ನಿರ್ಮಾಪಕರು ಮುತ್ತಿಗೆ ಹಾಕಲು ಕಾರಣವಾಯಿತು. ಆಕೆಯ ಮತ್ತೊಂದು ವಿಶೇಷತೆಯೆಂದರೆ ದೊಡ್ಡ ದೊಡ್ಡ ನಟರುಗಳೊಂದಿಗೆ ಮಾತ್ರವಲ್ಲ, ಉದ್ಯಮಕ್ಕೆ ಹೊಸದಾಗಿ ಕಾಲಿಟ್ಟ ಹೊಸ ಹೀರೋಗಳ ಜೊತೆ ಕೂಡಾ ಯಾವುದೆ ಗರ್ವವಿಲ್ಲದೆ ಮರ ಸುತ್ತಲು ಒಪ್ಪಿಕೊಳ್ಳುತ್ತಿದ್ದದ್ದು. ನೋಡುನೋಡುತ್ತಿದ್ದಂತೆ ಪೂಜಾ ಗಾಂಧಿ ಕನ್ನಡದ ಜನಪ್ರಿಯ ನಾಯಕಿಯಾಗಿದ್ದ ರಮ್ಯಾಳನ್ನು ಕೂಡಾ ಓವರ್ ಟೇಕ್ ಮಾಡಿ ಅತ್ಯಂತ ಬೇಡಿಕೆಯ ನಟಿ ಎನ್ನಿಸಲಾರಂಭಿಸಿದಳು.
Advertisement
ಪಂಜಾಬಿನ ಈ ಹುಡುಗಿ ಕರ್ನಾಟಕದ ಕಲಾಭಿಮಾನಿಗಳ ಮೆಚ್ಚಿನ ತಾರೆಯಾಗಿ ಬೆಳೆದು ನಿಂತಳು. ಆರಂಭದಲ್ಲಿ ಗಣೇಶ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡ ಪೂಜಾ ಗಾಂಧಿ ಆನಂತರ ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್‍ಕುಮಾರ್, ಶ್ರೀನಗರ ಕಿಟ್ಟಿ… ಹೀಗೆ ಬಹುತೇಕ ಎಲ್ಲಾ ಹೀರೋಗಳ ಜೊತೆ ನಟಿಸಿ ಮನ ಗೆದ್ದಳು. ಇದೇ ಸಂದರ್ಭದಲ್ಲಿ ಸುನೀಲ್ ಸಮೇತ ಅನೇಕ ಅಪರಿಚಿತ ಮತ್ತು ಉದಯೋನ್ಮುಖ ನಾಯಕರ ಜೊತೆ ಕೂಡಾ ಆಕೆ ನಟಿಸಿದಳು.
ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ, ಪೂಜಾ ಗಾಂಧಿ ನಟನೆಯಿಂದ ನಿರ್ಮಾಣಕ್ಕೆ ಜಾರಿದ್ದು ನಿಮಗೆಲ್ಲಾ ಗೊತ್ತಿರೋ ವಿಚಾರವೇ. ಅಭಿನೇತ್ರಿ ಸಿನಿಮಾವನ್ನು ಪೂಜಾ ನಿರ್ಮಿಸಿದ್ದರು. ನಂತರ ರಾವಣಿ ಎನ್ನುವ ಚಿತ್ರವನ್ನು ಆರಂಭಿಸಿದ್ದರೂ ಅದು ಟೇಕಾಫ್ ಆಗಲಿಲ್ಲ. ನಡುವೆ ಮತ್ತೆ ಬಂದ ಪೂಜಾ ಒಟ್ಟಿಗೇ ಮೂರು ಸಿನಿಮಾ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಭೂ, ಉದಾಹಿ ಮತ್ತು ಬ್ಲಾಕ್ ಅಂಡ್ ವೈಟ್ ಎನ್ನುವ ಚಿತ್ರಗಳನ್ನು ಆರಂಭಿಸಿದ್ದರು. ತೆಲುಗಿನ ಖ್ಯಾತ ನಟ ಜೆಡಿ ಚಕ್ರವರ್ತಿ ಈ ಮೂರೂ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ ಅಂತಾ ಹೇಳಿ ಸ್ವತಃ ಪೂಜಾ ಗಾಂಧಿ ಪ್ರೆಸ್ ಮೀಟ್ ಮಾಡಿದ್ದರು. ಇವು ಮೂರು ಸಿನಿಮಾಗಳ ಜೊತೆಗೆ ಇನ್ನೂ ಹತ್ತಾರು ಸಿನಿಮಾಗಳನ್ನು ಆರಂಭಿಸುವ ಪ್ಲಾನು ಮಾಡಿದ್ದೀನಿ ಅಂತಾ ಅಶೋಕ ಹೋಟೇಲಿನಲ್ಲಿ ಹೇಳಿದ್ದರು ಪೂಜಾ ಮೇಡಮ್ಮು.
ಹತ್ತಾರು ಸಿನಿಮಾ ಇರಲಿ, ಆರಂಭಿಕವಾಗಿ ಶುರು ಮಾಡಿದ ಮೂರು ಸಿನಿಮಾಗಳು ಕೂಡಾ ಈಗ ಪೂರ್ಣ ಪ್ರಮಾಣದಲ್ಲಿ ಕಣ್ಮುಚ್ಚಿದ ಸುದ್ದಿ ಕೇಳಿಬರುತ್ತಿದೆ. ಅಸಲಿಗೆ ಜೆ.ಡಿ. ಚಕ್ರವರ್ತಿಗೂ ಪೂಜಾ ಗಾಂಧಿಗೂ ನಡುವಿನ ಸಂಬಂಧವೇ ಕಿತ್ತು ಹೋಗಿದೆ ಅನ್ನೋ ನ್ಯೂಸು ಕೂಡಾ ದಟ್ಟವಾಗಿ ಹಬ್ಬಿದೆ. ಎಂಟರ್‍ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಬಿದ್ದಿದ್ದಾರೂ ಯಾಕೆ? ಏನಿದೆಲ್ಲಾ? ಪೂಜಾ ಗಾಂಧಿ ಮೇಲಿಂದ ಮೇಲೆ ಯಾಕೆ ಇಂಥವೇ ಸೋಲುಗಳಿಗೆ ಸಿಲುಕುತ್ತಿದ್ದಾರೆ? ಈ ಪ್ರಶ್ನೆಗಳಿಗೆಲ್ಲಾ ಸ್ವತಃ ಪೂಜಾ ಅವರೇ ಉತ್ತರಿಸಬೇಕು!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv