ಗಾಂಧಿನಗರ: ಇತ್ತೀಚೆಗೆ ಬಿಜೆಪಿ ಪಕ್ಷ ಸೇರಿರುವ ನಟಿ ಮೌಸಾಮಿ ಚಟರ್ಜಿ ಕಾರ್ಯಕ್ರಮವೊಂದರಲ್ಲಿ ಪ್ಯಾಂಟ್ ಧರಿಸಿದ್ದ ನಿರೂಪಕಿಯ ಮೇಲೆ ಗರಂ ಆಗಿದ್ದಾರೆ.
ಸೋಮವಾರ ಗುಜರಾತಿನ ಸೂರತ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮೌಸಾಮಿ ಚಟರ್ಜಿ ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭಿಸಿದ ನಿರೂಪಕಿ ವೇದಿಕೆಯ ಮೇಲೆ ಆಸೀನರಾಗಿರುವ ಎಲ್ಲ ಗಣ್ಯರನ್ನು ಪರಿಚಯಿಸಿ ಸ್ವಾಗತಿಸುತ್ತಿದ್ದರು. ಈ ಸಂದರ್ಭದಲ್ಲಿ ನಟಿ ಹಾಗೂ ಬಿಜೆಪಿ ನಾಯಕಿಯಾಗಿರುವ ಮೌಸಮಿ ಅವರನ್ನು ಪರಿಚಯಿಸಿದರು. ಜನರನ್ನು ಉದ್ದೇಶಿಸಿ ಮಾತನಾಡುವಾಗ ಮೌಸಮಿ, ಪ್ಯಾಂಟ್ ಧರಿಸಿದ್ದ ನಿರೂಪಕಿಗೆ ಬಹಿರಂಗವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
Advertisement
ಈ ರೀತಿಯ ಕಾರ್ಯಕ್ರಮಕ್ಕೆ ಪ್ಯಾಂಟ್ ಧರಿಸಿಕೊಂಡು ಬರಬಾರದು. ಪ್ಯಾಂಟ್ ಬದಲು ಸೀರೆ, ಕುರ್ತಾ, ಪೈಜಾಮ ಮತ್ತು ಚೂಡಿದಾರ್ ಧರಿಸಿಕೊಂಡು ಬರಬೇಕು. ಇದು ಸರಿಯಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಿರೂಪಕಿ ಏನನ್ನು ಪ್ರತಿಕ್ರಿಯಿಸದೇ ಸುಮ್ಮನಾಗಿದ್ದರು. ನಾನು ಒಬ್ಬ ಭಾರತೀಯ ಮಹಿಳೆಯಾಗಿದ್ದು, ಇಂದಿನ ಯುವಜನತೆಗೆ ಯಾವ ರೀತಿಯ ಉಡುಗೆಯನ್ನು ಧರಿಸಬೇಕು ಹೇಳುವ ಹಕ್ಕು ನನಗಿದೆ. ನಿರೂಪಕಿಗೆ ತಾಯಿಯ ಸ್ಥಾನದಲ್ಲಿ ನಿಂತು ಉಡುಗೆ-ತೊಡುಗೆಯ ಬಗ್ಗೆ ಸಲಹೆ ನೀಡಿದ್ದೇನೆ. ನನ್ನ ಹೇಳಿಕೆಗೂ ಮತ್ತು ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂಬುದನ್ನು ಚಟರ್ಜಿ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಮೌಸಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮ ಆಯೋಜಕ ಉಮೇಶ್ ಮೆಹ್ತಾ, ನನಗೂ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಸೂರತ್ ಬಿಜೆಪಿ ಮುಖ್ಯಸ್ಥ ನಿತಿನ್ ಭಾಯಿವಾಲಾ, ಅಧ್ಯಕ್ಷ ಪಿ.ವಿ.ಎಸ್ ಮತ್ತು ಇತರೆ ಪಕ್ಷದ ಮುಖಂಡರು ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದ ನಿರೂಪಣೆಗಾಗಿ ಪರಿಚಯದ ಯುವತಿಯನ್ನು ಕರೆಸಲಾಗಿತ್ತು. ನಿರೂಪಣೆಗಾಗಿ ಯುವತಿಗೆ ಸಂಭಾವನೆಯನ್ನು ನೀಡಲಾಗಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.
ಜನವರಿ 2ರಂದು ಮೌಸಮಿ ಚಟರ್ಜಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು. ಸೂರತ್ ನಗರದ ಬಿಜೆಪಿ ಮುಖಂಡರಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮೌಸಮಿ ಚಟರ್ಜಿ ಹಾಜರಾಗಿದ್ದರು. ಈ ಹಿಂದೆ ಮೌಸಮಿ ಚಟರ್ಜಿ ಕಾಂಗ್ರೆಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv