Connect with us

ಲವರ್‍ಗಳಿಗಾಗಿ ಬಹುಭಾಷಾ ನಟಿ ಕಿಡ್ನಾಪ್: ಪೊಲೀಸರ ವಿಚಾರಣೆಯಲ್ಲಿ ಪಲ್ಸರ್ ಸುನಿ ಹೇಳಿದ್ದೇನು?

ಲವರ್‍ಗಳಿಗಾಗಿ ಬಹುಭಾಷಾ ನಟಿ ಕಿಡ್ನಾಪ್: ಪೊಲೀಸರ ವಿಚಾರಣೆಯಲ್ಲಿ ಪಲ್ಸರ್ ಸುನಿ ಹೇಳಿದ್ದೇನು?

ತಿರುವನಂತಪುರಂ: ಬಹುಭಾಷಾ ನಟಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನ ಗುರುವಾರದಿಂದ ಪೊಲಿಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಟಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸುಪಾರಿ ಪಡೆದಿಲ್ಲ ಎಂದು ಸುನಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ನಟಿ ಮೇಲಿನ ದೌರ್ಜನ್ಯಕ್ಕೆ ಸುಪಾರಿ ಪಡೆದಿಲ್ಲ. ಕೃತ್ಯದ ಹಿಂದೆ ಯಾವುದೇ ಪಿತೂರಿ ಇರಲಿಲ್ಲ. ನಟಿಯನ್ನು ಬ್ಲಾಕ್‍ಮೇಲ್ ಮಾಡಿ ಹಣ ಪಡೆಯುವುದಕ್ಕೆ ಹೀಗೆ ಮಾಡಿದ್ವಿ ಎಂದು ಸುನಿ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಲವರ್‍ಗೋಸ್ಕರ ಮಾಡಿದ್ದು: ನಟಿಯನ್ನು ಬ್ಲಾಕ್‍ಮೇಲ್ ಮಾಡಿ ಹಣ ಕೀಳಲು ಈ ರೀತಿ ಮಾಡಿದೆ. ನಟಿಯ ಬಳಿ 50 ಲಕ್ಷ ರೂ. ಗೆ ಡಿಮ್ಯಾಂಡ್ ಮಾಡಲು ಪ್ಲಾನ್ ಮಾಡಿದ್ದೆ. ಇದರಿಂದ ಬಂದ ಹಣದಲ್ಲಿ ಲವರ್ ಜೊತೆಗೆ ಐಷಾರಾಮಿ ಜೀವನ ನಡೆಸಲು ಇಚ್ಛಿಸಿದ್ದೆ ಎಂದು ಸುನಿ ಪೊಲೀಸರಿಗೆ ಹೇಳಿದ್ದಾನೆ. ಫೆಬ್ರವರಿ 17ರ ರಾತ್ರಿ ಘಟನೆ ನಡೆಯುವುದಕ್ಕೂ ಮುನ್ನ ಸುನಿ ಕೊಚ್ಚಿಯ ಕಡವಂದರದಲ್ಲಿ ತನ್ನ ಗೆಳತಿಯನ್ನ ಭೇಟಿಯಾಗಿದ್ದ. ನಂತರ ಅಲೆಪ್ಪಿಗೆ ಹೊರಟ ಎಂದು ವಿಶೇಷ ತನಿಖಾ ದಳದ ಅಧಿಕಾರಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಪಲ್ಸರ್ ಸುನಿಗೆ ಮೂವರು ಗರ್ಲ್‍ಫ್ರೆಂಡ್ಸ್ ಇದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಸುನಿಯ ಕಾಲ್ ಡೀಟೇಲ್ಸ್ ಪರಿಶೀಲಿಸಿದಾಗ ಈತ ನಟಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದಾಗಲೂ ತನ್ನ ಇಬ್ಬರು ಗರ್ಲ್‍ಫ್ರೆಂಡ್ಸ್ ಜೊತೆ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ.

ಅಲ್ಲದೆ ಈವರೆಗೆ ನಟಿಯ ವೀಡಿಯೋ ಶೂಟ್ ಮಾಡಲಾಗಿದೆ ಎನ್ನಲಾದ ಮೊಬೈಲ್ ಫೋನ್ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ನಟಿ ಪೊಲೀಸರಿಗೆ ದೂರು ನೀಡಿದ ನಂತರ ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಕೊಚ್ಚಿಯಲ್ಲಿ ಎಲ್ಲೋ ಮೊಬೈಲ್ ಫೋನನ್ನು ಎಸೆದಿರುವುದಾಗಿ ಸುನಿ ಹೇಳಿದ್ದಾನೆ. ಆದ್ರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದು ಮೊಬೈಲ್ ಪತ್ತೆಯಾಗಿಲ್ಲ.

ಆದರೆ ಸುನಿಯ ಈ ಹೇಳಿಕೆ ಬಗ್ಗೆ ವಿಜೇಶ್‍ನ ವಿಚಾರಣೆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದು, ಕಾಲ್ ಲಿಸ್ಟ್ ಆಧಾರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಅಲುವಾ ಪೊಲೀಸ್ ಕ್ಲಬ್‍ನಲ್ಲಿ ಆರೋಪಿಗಳಾದ ಸುನಿ ಹಾಗೂ ವಿಜೇಶ್‍ನ ವಿಚಾರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕೋರ್ಟ್‍ಗೆ ಹಾಜರುಪಡಿಸಿದ ನಂತರ ವಿಚಾರಣೆಗಾಗಿ ಆರೋಪಿಗಳನ್ನು ಮತ್ತಷ್ಟು ದಿನ ವಶಕ್ಕೆ ನೀಡಬೇಕೆಂದು ಕೇಳುತ್ತೇವೆ ಎಂದು ಎಡಿಜಿಪಿ ಸಂಧ್ಯಾ ತಿಳಿಸಿದ್ದಾರೆ.

ಗುರುವಾರದಂದು ಆರೋಪಿಗಳಾದ ವಿಜೇಶ್ ಹಾಗೂ ಪಲ್ಸರ್ ಸುನಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದರು. ಎರ್ನಾಕುಲಂನ ಎಸಿಜೆಎಂ ಕೋರ್ಟ್‍ಗೆ ಶರಣಾಗಲು ಮಧ್ಯಾಹ್ನ 1.10ರ ವೇಳೆಯಲ್ಲಿ ಸುನಿ ಹಾಗೂ ವಿಜೇಶ್ ಬಂದಿದ್ದರು. ಈ ವೇಳೆ ಕೋರ್ಟ್ ನ್ಯಾಯಾಧೀಶರು ಊಟಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಪೊಲೀಸರೊಬ್ಬರು ನೀವ್ಯಾಕೆ ಇಲ್ಲಿದ್ದೀರಿ ಅಂತ ಕೇಳಿದ್ರು. ಆಗ ಪ್ರಮುಖವಾದ ಕೇಸೊಂದರ ಕುರಿತಾಗಿ ಶರಣಾಗೋಕೆ ಬಂದಿದ್ದೀವಿ ಅಂತಾ ಆರೋಪಿಗಳು ಹೇಳಿದ್ದರು. ಕೊನೆಗೆ ಈತನೇ ಪಲ್ಸರ್ ಸುನಿ ಅನ್ನೋದು ಖಚಿತವಾಗ್ತಿದ್ದಂತೆ ಪೊಲೀಸರು ಆತನನ್ನ ನ್ಯಾಯಾಲಯದ ಆವರಣದಲ್ಲೇ ಬಲವಂತವಾಗಿ ಬಂಧಿಸಿ ಪೊಲೀಸ್ ಠಾಣೆಗೆ ಕರೆದೋಯ್ದರು.

ಕಳೆದ ಶುಕ್ರವಾರ ತಡರಾತ್ರಿ ಶೂಟಿಂಗ್ ಮುಗಿಸಿ ತ್ರಿಶೂರ್‍ನಿಂದ ಎರ್ನಾಕುಲಂಗೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಏಳು ಮಂದಿಯ ತಂಡವೊಂದು ನಟಿಯನ್ನು ಅಪಹರಿಸಿದ್ದರು. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅರ್ಧ ದಾರಿಯಲ್ಲೆ ಬಿಟ್ಟು ಹೋಗಿದ್ದರು. ನಂತರ ನಟಿ ನಿರ್ದೇಶಕರೊಬ್ಬರ ಮನೆಗೆ ತೆರಳಿ ಅಲ್ಲಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದುಷ್ಕರ್ಮಿಗಳು ಈ ಕೃತ್ಯವೆಸಗಲು ಕೊಟೇಷನ್ ಪಡೆದಿರುವುದಾಗಿ ಹೇಳಿದ್ದು, ನಾನು ಅವರೊಂದಿಗೆ ಸಹಕರಿಸಿದ್ರೆ ಬೇಗನೆ ಬಿಟ್ಟುಬಿಡುವುದಾಗಿ ಹೇಳಿದ್ರು ಎಂದು ನಟಿ ಪೊಲೀಸರಿಗೆ ಹೇಳಿಕೆ ನೀಡಿದ್ದರು.

Advertisement
Advertisement