ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಮೇಘನಾ ರಾಜ್, ಇದೀಗ ನಿರ್ಮಾಪಕಿಯಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ತಾವೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಹಾಗಂತ ಇವರೊಬ್ಬರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿಲ್ಲ, ಬದಲಿಗೆ ಪನ್ನಗಾಭರಣ ಕೂಡ ಇವರೊಂದಿಗೆ ಕೈ ಜೋಡಿಸಿದ್ದಾರೆ.
ಕಳೆದ ವರ್ಷ ಪನ್ನಗಾಭರಣ, ವಿಶಾಲ್ ಮತ್ತು ವಾಸುಕಿ ವೈಭವ್ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದ ಮೇಘನಾ ರಾಜ್, ಹೊಸದೊಂದು ಸುದ್ದಿ ಕೊಡಲಿದ್ದೇನೆ ಎಂದು ಹೇಳಿದ್ದರು. ಆನಂತರ ಒಟ್ಟಿಗೆ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೇ ಮತ್ತೊಂದು ಫೋಟೋ ಹಂಚಿಕೊಂಡಿದ್ದ ಮೇಘನಾ, ಈ ಸಿನಿಮಾವನ್ನು ವಿಶಾಲ್ ನಿರ್ದೇಶನ ಮಾಡುತ್ತಿದ್ದು, ಪನ್ನಗಾಭರಣ ನಿರ್ಮಾಪಕರು ಎಂದು ಹೇಳಿದ್ದರು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಮೇಘನಾ ಕೂಡ ನಿರ್ಮಾಪಕಿಯಾಗುತ್ತಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್ ನಟನೆಯ ಹಾಲಿವುಡ್ ಚಿತ್ರತಂಡ
ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಪ್ರಮುಖ ಪಾತ್ರವನ್ನು ಮೇಘನಾ ರಾಜ್ ಅವರೇ ನಿರ್ವಹಿಸುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಸದ್ಯ ಕಾಂತ ಕನ್ನಲ್ಲಿ ನಿರ್ದೇಶನದ ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದು, ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿದ್ದಾರಂತೆ. ಸದ್ಯದಲ್ಲೇ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ.