ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರ ಮಲ್ಟಿಸ್ಟಾರ್ ಮುನಿರತ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ನಾಯಕಿಯ ಆಯ್ಕೆ ಅಂತಿಮವಾಗಿದೆ. ರಾಜಾ ಹುಲಿ ಹುಡುಗಿ ಮೇಘನಾ ರಾಜ್ ಭಾನುಮತಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದು, ಮುಂದಿನ ವಾರದಿಂದ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಗದಾಯುದ್ಧ ದೃಶ್ಯವನ್ನು ಚಿತ್ರೀಕರಿಸುವುದಕ್ಕೆ ಸಕಲ ತಯಾರಿ ಆಗುತ್ತಿದೆ. ಆದರೆ ದುರ್ಯೋಧನ ಪಾತ್ರದ ದರ್ಶನ್ ಗೆ ನಾಯಕಿಯ ಪಾತ್ರ ಮಾತ್ರ ಅಂತಿಮವಾಗದೇ ಚಿತ್ರ ತಂಡ ತಲೆ ಬಿಸಿ ಮಾಡಿಕೊಂಡಿತ್ತು. ಕೊನೆಗೂ ಕನ್ನಡದ ನಟಿಯೇ ದರ್ಶನ್‍ಗೆ ಜೋಡಿಯಾಗಿದ್ದಾರೆ. ಇದರಿಂದ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ತುಂಬಾ ಖುಷಿ ಕೊಟ್ಟಿದೆ.
ಕುರುಕ್ಷೇತ್ರ ಸಿನಿಮಾವು ಸ್ಯಾಂಡಲ್ ವುಡ್ ನ ಬಹುದೊಡ್ಡ ತಾರಬಳಗ ಮತ್ತು ದೊಡ್ಡ ಬಜೆಟ್ ನ ಸಿನಿಮಾವಾಗಿದ್ದು, ದರ್ಶನ್ ಅವರ 50ನೇ ಚಿತ್ರವಾಗಿದೆ. ಆದ್ದರಿಂದ ದರ್ಶನ್ ಪತ್ನಿ ಭಾನುಮತಿಯ ಪಾತ್ರಕ್ಕೆ ಈ ಮುಂಚೆ ದಕ್ಷಿಣ ಭಾರತದ ಖ್ಯಾತ ನಟಿಯರಾದ ರೆಜಿನಾ ಮತ್ತು ರಮ್ಯಾ ನಂಬಿಸನ್ ಆಯ್ಕೆ ಆಗಿದ್ದರು. ಆದರೆ ಈಗ ಅವರಿಬ್ಬರ ಬದಲು ಕೊನೆಗೆ ಮೇಘನಾ ರಾಜ್ ಆಯ್ಕೆ ಆಗಿದ್ದಾರೆ.
ಕಳೆದ ತಿಂಗಳು ನಟ ಚಿರಂಜೀವಿ ಸರ್ಜಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೇಘನಾ, ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಕುರುಕ್ಷೇತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಟಿ.ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಅಲ್ಲಮ’ ಚಿತ್ರದಲ್ಲಿ ಮೇಘನಾ ನಾಯಕಿ ಆಗಿ ಕಾಣಿಸಿಕೊಂಡಿದ್ದು, ಪೌರಾಣಿಕ ಪಾತ್ರವನ್ನು ನಿಭಾಯಿಸಿದ್ದರು. ಹೀಗಾಗಿ ಕುರುಕ್ಷೇತ್ರ ಚಿತ್ರದಲ್ಲಿ ಭಾನುಮತಿ ಪಾತ್ರಕ್ಕೆ ಮೇಘನಾ ಸೂಕ್ತ ಎಂದು ಆಯ್ಕೆ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಮೇಘನಾ ದರ್ಶನ್ ಗೆ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೂಸ್ ಮಾದ ಯೋಗೇಶ್, ರಾಕಿಂಗ್ ಸ್ಟಾರ್ ಯಶ್, ಶ್ರೀನಗರ ಕಿಟ್ಟಿ, ಚಿರಂಜೀವಿ ಸರ್ಜಾ, ಧನಂಜಯ್ ಅಂತಹ ಸ್ಟಾರ್ ನಟರ ಜೊತೆ ಈ ಹಿಂದೆ ಅಭಿನಯಿಸಿದ್ದಾರೆ.