ಕಿರುತೆರೆಯಲ್ಲಿ ನಾಯಕಿ ಪಾತ್ರ ಮಾಡಿ ಪ್ರಸಿದ್ಧಿ ಪಡೆಯುತ್ತಲೇ ಹಿರಿತೆರೆಗೂ ನಾಯಕಿಯರಾಗಿ ಎಂಟ್ರಿ ಕೊಟ್ಟವರ ಪಟ್ಟಿ ದೊಡ್ಡದಿದೆ. ಅದರಲ್ಲಿ ಯಶಸ್ವಿಯಾದವರ ಪಟ್ಟಿಯೂ ಮತ್ತೊಂದಿದೆ. ಅದರಲ್ಲಿ ತಮ್ಮ ಹೆಸರನ್ನೂ ಛಾಪಿಸಿಕೊಂಡಿರೋ ನಟಿ ಮಯೂರಿ. ಜಯ ಕಾರ್ತಿಕ್ ಅವರಿಗೆ ಜೋಡಿಯಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಮಯೂರಿಯೀಗ ಸ್ಯಾಂಡಲ್‍ವುಡ್ಡಿನ ಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದ್ದಾರೆ.
Advertisement
ಕೃಷ್ಣಲೀಲಾ ಚಿತ್ರದ ಮೂಲಕ ಅಜೇಯ್ ರಾವ್ ಜೋಡಿಯಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ ಆ ನಂತರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಿತ್ರರಂಗದಲ್ಲಿಯೂ ಗೆಲುವು ದಾಖಲಿಸಿದ ಅವರೀಗ ಮೌನಂ ಮೂಡಿಗೆ ಜಾರಿದ್ದಾರೆ!
Advertisement
Advertisement
ಮೌನಂ ಮಯೂರಿ ನಾಯಕಿಯಾಗಿ ನಟಿಸಿರೋ ಹೊಸ ಚಿತ್ರದ ಶೀರ್ಷಿಕೆ. ನಿಹಾರಿಕಾ ಮೂವೀಸ್ ಬ್ಯಾನರಿನಡಿಯಲ್ಲಿ ಶ್ರೀಹರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಪಂಡಿತ್ ನಿರ್ದೇಶನದ ಈ ಚಿತ್ರದಲ್ಲಿ ಮಯೂರಿ ಎರಡು ಶೇಡ್ ಗಳಿರೋ ಪಾತ್ರದಲ್ಲಿ ನಟಿಸಿದ್ದಾರಂತೆ. ಅದರಲ್ಲೊಂದು ಮೌನಗೌರಿಯಂಥಾ ಹೋಮ್ಲೀ ಪಾತ್ರವಾದರೆ ಮತ್ತೊಂದು ಪಕ್ಕಾ ಮಾಸ್ ಶೇಡಿನ ಪಾತ್ರವಂತೆ.
Advertisement
ವಿಶೇಷವೆಂದರೆ, ಎರಡನೇ ಶೇಡಿನ ಪಾತ್ರದಲ್ಲಿ ಮಯೂರಿ ಪಕ್ಕಾ ಆಕ್ಷನ್ ಮೂಡಿನಲ್ಲಿಯೂ ನಟಿಸಿದ್ದಾರಂತೆ. ಇದು ಅವರ ಪಾಲಿಗೆ ಹೊಸಾ ಅನುಭವ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡೇ ಮಯೂರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ವಿಶಿಷ್ಟವಾದ ಕಥೆ ಹೊಂದಿರೋ ಈ ಚಿತ್ರದಲ್ಲಿ ಪ್ರತೀ ಪಾತ್ರಗಳೂ ವಿಭಿನ್ನವಾಗಿರಲಿವೆಯಂತೆ. ಅವಿನಾಶ್ ಕೂಡಾ ಅಷ್ಟೇ ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಪಾತ್ರಕ್ಕೆ ಬರೋಬ್ಬರಿ ಆರು ಶೇಡುಗಳಿವೆಯಂತೆ.
ಜೀವನಕ್ಕೆ ಹತ್ತಿರವಾದ ಕಥೆ ಹೊಂದಿರೋ ಈ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಳ್ಳುತ್ತಾ ಬೇಗನೆ ಪ್ರೇಕ್ಷಕರಿಗೆ ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಮೌನಂ ತಮ್ಮ ಚಿತ್ರ ಜೀವನಕ್ಕೆ ಹೊಸ ಓಘ ಮತ್ತು ಮತ್ತೊಂದಷ್ಟು ಅವಕಾಶಗಳನ್ನು ತಂದು ಕೊಡಲಿದೆ ಎಂಬ ಗಾಢ ಭರವಸೆ ಮಯೂರಿಯದ್ದು.