ಬಾಲಿವುಡ್ ನಟಿಯರಾದ ಮಲೈಕಾ ಅರೋರಾ (Malaika Arora) ಹಾಗೂ ಅಮೃತಾ ಅರೋರಾ ತಂದೆ ಅನಿಲ್ (Anil) ಅರೋರಾ ಮೆಹ್ತಾ ತಮ್ಮ ಇಳಿ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ 6ನೇ ಮಹಡಿಯಿಂದ ಕೆಳಗೆ ಬಿದ್ದ ಮಲೈಕಾ ತಂದೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು ತನಿಖೆಯೂ ನಡೆಯುತ್ತಿದೆ. ಪತ್ನಿ ಜೋಯಿಸ್‍ರಿಂದ ಅನಿಲ್ ವಿಚ್ಛೇದನ ಪಡೆದಿದ್ದರೂ ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸವಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬಂದರೂ ನಟಿಯ ತಂದೆಯ ಸಾವಿಗೆ ಅಸಲಿ ಕಾರಣ ಏನು ಅನ್ನುವುದರ ಕುರಿತು ಚರ್ಚೆ ಜೋರಾಗಿದೆ. ತಮ್ಮ 62ನೇ ವಯಸ್ಸಿನಲ್ಲಿ ಅದ್ಯಾವ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಅನ್ನುವುದರ ತನಿಖೆ ನಡೆಯುವ ಹಂತದಲ್ಲಿರುವಾಗಲೇ ಅನಿಲ್ ಅರೋರಾ ತಮ್ಮ ಪುತ್ರಿಯರಿಗೆ ಕೊನೆಯ ಬಾರಿ ಕರೆಮಾಡಿ ಕೆಲವೊಂದು ವಿಚಾರ ಹಂಚಿಕೊಂಡಿರುವ ಸುದ್ದಿ ಬೆಳಕಿಗೆ ಬಂದಿದೆ.
ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಬುಧವಾರ (ಸೆ.12) ಬೆಳಗ್ಗೆ ಬಾಲ್ಕನಿಯಿಂದ ಬಿದ್ದು ಅನಿಲ್ ಅರೋರಾ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಾರಂಭಿಕ ತನಿಖೆಯಲ್ಲಿ ಕಂಡು ಬರುತ್ತಿದೆ. ತಾವಿದ್ದ ಅಪಾರ್ಟ್‌ಮೆಂಟ್‌ನ ಹಾಲ್‍ನಲ್ಲಿ ಪತಿ ಚಪ್ಪಲಿ ಬಿಚ್ಚಿಟ್ಟಿದ್ದನ್ನ ನೋಡಿದ ಪತ್ನಿ ಬಾಲ್ಕನಿ ಬಳಿ ಕಣ್ಣು ಹಾಯಿಸುತ್ತಾರೆ, ಕ್ಷಣಮಾತ್ರದಲ್ಲೇ ಕೆಳಗಿನಿಂದ ಸೆಕ್ಯುರಿಟಿ ಹೆಲ್ಪ್ ಅಂತ ಚೀರುವುದು ಕೇಳ್ದಾಗ ಪತ್ನಿಗೆ ಪತಿಯೇ ಬಿದ್ದರು ಎಂದು ಗಮನಕ್ಕೆ ಬಂದಿರುತ್ತದೆ ಎನ್ನಲಾಗುತ್ತಿದೆ. ಪುತ್ರಿಯರಿಬ್ಬರಿಗೂ ಈ ವಿಚಾರ ಬಹಳ ಶಾಕಿಂಗ್ ಆಗಿದ್ದು ಇಬ್ಬರೂ ತಂದೆಯ ಸಾವಿನ ಕುರಿತು ಯಾವುದೇ ಪ್ರತಿಕ್ರಿಯೆ ಇಲ್ಲಿವರೆಗೆ ನೀಡಿಲ್ಲ. ಹಿಂದಿನ ದಿನ ಮಲೈಕಾ ಕೂಡ ಅಪಾರ್ಟ್‌ಮೆಂಟ್‌ಗೆ ಬಂದು ತಂದೆಯನ್ನ ಭೇಟಿಯಾಗಿ ಹೋಗಿದ್ದರು. ಕಾರಣ ಆ ದಿನ ತಂದೆ ಅನಿಲ್ ಅರೋರಾ ಮಗಳಿಗೆ ಕರೆ ಮಾಡಿ ನಾನು ಅಸ್ವಸ್ಥನಾಗಿದ್ದೇನೆ ಹಾಗೂ ಬಳಲಿದ್ದೇನೆ (ಐಎಮ್ ಸಿಕ್ ಆ್ಯಂಡ್ ಟೈಯರ್ಡ್) ಎಂದಿದ್ದರಂತೆ. ಹೀಗಾಗೇ ಹಿಂದಿನ ದಿನ ಮಲೈಕಾ ತಂದೆಯನ್ನ ಭೇಟಿ ಮಾಡಿ ಧೈರ್ಯ ತುಂಬಿ ಬಂದಿದ್ದರು ಎನ್ನಲಾಗುತ್ತೆ. ಆದರೆ ಮರುದಿನ ಬೆಳಗ್ಗೆ ಸಾವಿನ ಸುದ್ದಿ ಕೇಳಿಬಂದಿದೆ. ಅನಿಲ್ ಅರೋರಾ ಮೆಹ್ತಾ ವಯೋಸಹಜ ಮಂಡಿನೋವುನಿಂದ ಬಳಲುತ್ತಿದ್ದರಂತೆ, ಆದರೆ ಇಷ್ಟೇ ಕಾರಣಕ್ಕೆ, ಪ್ರಾಣ ಹಾನಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರೇಕೆ ಅನ್ನೋದು ಅನುಮಾನ ಹುಟ್ಟಿಸುತ್ತಿದೆ.
Advertisement
Advertisement
ಮಲೈಕಾ ಹಾಗೂ ಅಮೃತಾ ತಮ್ಮ ತಮ್ಮ ಕುಟುಂಬದ ಜೊತೆ ಬೇರೆ ಬೇರೆ ವಾಸಿಸುತ್ತಿದ್ದಾರೆ. ಅಂದಹಾಗೆ, ಇವರ ತಂದೆ- ತಾಯಿ ಅನಿಲ್ ಹಾಗೂ ಜೋಯಿಸ್ ಕೂಡ ಹಲವು ವರ್ಷ ದೂರವಿದ್ದು ಇತ್ತೀಚೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಇದೀಗ ಏಕಾಏಕಿ ತಂದೆ ಪ್ರಾಣ ಕಳೆದುಕೊಳ್ಳಲು ಏನು ಕಾರಣ ಎಂದು ತಿಳಿಯದೆ ಪುತ್ರಿಯರು ಕಂಗಾಲಾಗಿದ್ದಾರೆ. ಗುರುವಾರ ಅಂತ್ಯಕ್ರಿಯೆ ನಡೆದಿದ್ದು ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ರು. ಹೀಗೆ ಮಲೈಕಾ ತಂದೆ ಸಾವಿಗೆ ಕಾರಣ ಅನಾರೋಗ್ಯದ ಸಮಸ್ಯೆಯೇ ಇರಬಹುದಾ ಎಂದು ಚರ್ಚೆ ನಡೆಯುತ್ತಿದೆ. ಮಕ್ಕಳಿಗೆ ಕರೆ ಮಾಡಿ ಮಾತನಾಡಿರುವ ಕೊನೆ ಸಂದೇಶವೇ ಆತ್ಮಹತ್ಯೆಯ ರಹಸ್ಯಕ್ಕೆ ಉತ್ತರವಾ ನೋಡ್ಬೇಕು.