80ರ ದಶಕದ ಟಾಪ್ ನಟಿ ಮಹಾಲಕ್ಷ್ಮಿ ಮತ್ತೆ ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಸುಮಾರು 30 ವರ್ಷಗಳ ಕಾಲ ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ನಟಿ, ಈಗ ಟಿವಿ ಪರದೆಗೆ ಮರಳಿದ್ದಾರೆ. ಕನ್ನಡದ ಕಂಪನ್ನು ಪಸರಿಸಲು ಬರುತ್ತಿರೋ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ಗೆ ಮಹಾಲಕ್ಷ್ಮಿ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಬದ್ಧವೈರಿ ಕಂಗನಾ ಚಿತ್ರ ನೋಡುವ ಆಸೆ ಇದೆ ಎಂದ ಕರಣ್ : ಭಯವಾಗುತ್ತಿದೆ ಅಂತಾರೆ ನಟಿ
ಮಹಾಲಕ್ಷ್ಮಿ ಮೂಲತಃ ತಮಿಳುನಾಡಿನವರಾಗಿದ್ದರೂ, ಕನ್ನಡದ ಸಿನಿಮಾದಿಂದ ಹೆಚ್ಚಿನ ಜನಪ್ರಿಯತೆ ಸಿಕ್ಕಿತ್ತು. ಬಡ್ಡಿ ಬಂಗಾರಮ್ಮ, ಸ್ವಾಭಿಮಾನ, ಮದುವೆ ಮಾಡು ತಮಾಷೆ ನೋಡು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಈಗ ಕಾವೇರಿ ಕನ್ನಡ ಮೀಡಿಯಂನಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಮನೆಯ ಒಡತಿ, ಶಿಸ್ತಿನ ಅಜ್ಜಿಯಾಗಿ ಮಹಾಲಕ್ಷ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿದೆ ವಿನೂತನ ಧಾರಾವಾಹಿ ಕಾವೇರಿ ಕನ್ನಡ ಮೀಡಿಯಂ. ಹೆಸರೇ ಹೇಳೋ ತರ ಇದು ಕನ್ನಡದ ಕಂಪು ತುಂಬಿರೋ ಸೀರಿಯಲ್ ಅಂತಾನೆ ಹೇಳಬಹುದು. ಕನ್ನಡ ಬರೀ ಭಾಷೆ ಅಲ್ಲ ಬದುಕು ಅಂತ ನಂಬಿರೋ ಊರಿನಲ್ಲಿ ಹುಟ್ಟಿರೋ ಕಾವೇರಿ ಅನ್ನೋ ಹೆಣ್ಣು ಮಗಳು ವೃತ್ತಿಯಲ್ಲಿ ಶಿಕ್ಷಕಿ, ಅಪ್ಪ ಕಟ್ಟಿರೋ ಕನ್ನಡ ಶಾಲೆಯನ್ನು ಕಾಪಾಡೋದಕ್ಕಾಗಿ ಹಾಗೂ ಅದರ ಅಭಿವೃದ್ದಿಗಾಗಿ ಸದಾಕಾಲ ಹೋರಾಟ ಮಾಡುವ ಪಾತ್ರವಾಗಿದೆ.
ಕಥಾ ನಾಯಕ ಅಗಸ್ತ್ಯ ಇಂಡಿಯಾದಲ್ಲೇ ಒನ್ ಆಫ್ ದಿ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಓನರ್. ಈತನಿಗೆ ಆತನ ಶಾಲೆ ಅಭಿವೃದ್ಧಿ ಆಗ್ಬೇಕು ಅಷ್ಟೇ ವಿನಹ ಬೇರೆ ಯಾವುದು ಆತನ ಲೆಕ್ಕಕ್ಕೆ ಬರಲ್ಲ. ಆದರೆ ಕನ್ನಡ ಶಾಲೆಯನ್ನು ಉಳಿಸೋ ಸಲುವಾಗಿ ಅಗಸ್ತ್ಯ ನೀಡಿರುವ ಸವಾಲನ್ನು ಸ್ವೀಕರಿಸಿ, ಕಾವೇರಿ 6 ತಿಂಗಳುಗಳ ಕಾಲ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾಳೆ. ಇವರಿಬ್ಬರ ಉದ್ದೇಶ ಒಂದೇ ಆಗಿದ್ದರೂ ಅನುಸರಿಸೋ ದಾರಿಗಳು ಮಾತ್ರ ಬೇರೆ ಬೇರೆ. ಈ ಕವಲು ದಾರಿಗಳು ಹೇಗೆ ಒಂದಾಗುತ್ತವೆ ಅನ್ನೋದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಈ ಸೀರಿಯಲ್‌ನ ನಾಯಕನಾಗಿ ರಕ್ಷಿತ್, ನಾಯಕಿಯಾಗಿ ಪ್ರಿಯಾ ಜೆ ಆಚಾರ್ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಮತ್ತೊಂದು ವಿಶೇಷತೆ ಅಂದರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಮಹಾಲಕ್ಷ್ಮಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕರ್ನಾಟಕದ ಸುಂದರ ತಾಣಗಳಾದ ದಕ್ಷಿಣ ಕನ್ನಡ, ಆಗುಂಬೆಯಲ್ಲಿ ಈ ಧಾರಾವಾಹಿಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅದ್ಬುತ ತಾರಾಬಳಗವನ್ನು ಈ ಧಾರಾವಾಹಿ ಹೊಂದಿದೆ.