ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹದ ಸಂತ್ರಸ್ತರಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಹಲವು ಕಡೆಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ ಸ್ಯಾಂಡಲ್‍ವುಡ್ ಹಿರಿಯ ನಟಿ ಡಾ. ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಕೂಡ ಸ್ಪಂದಿಸಿದ್ದು, ತಾವೇ ಸ್ವತಃ ಮುಸುಕಿನ ಜೋಳದ ಮೇವನ್ನು ಖರೀದಿಸಿ ಜಾನುವಾರುಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ಲೀಲಾವತಿ ಅವರು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತಾವು ನೆಲೆಸಿರುವ ಸೋಲದೇವನಹಳ್ಳಿ ಗ್ರಾಮದ ಬಳಿಯ ರೈತರಿಂದ ಮೇವು ಖರೀದಿ ಮಾಡಿದ್ದಾರೆ. ಈ ಮೂಲಕ ಪ್ರವಾಹ ಪೀಡಿತ ಜನ ಹಾಗೂ ಮೂಕ ಪ್ರಾಣಿಗಳ ಸಹಾಯಕ್ಕೆ ಅವರ ಕುಟುಂಬ ಮುಂದಾಗಿದ್ದು, ಶ್ಲಾಘನೀಯವಾಗಿದೆ.
Advertisement
Advertisement
ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದನೆ ಮಾಡಿರುವ ಲೀಲಾವತಿ, ಪ್ರಾಣಿಗಳ ಮೂಕರೋಧನೆ ನೋಡಲಾರದೇ, ಜಾನುವಾರುಗಳಿಗೆ ಒಂದು ಲೋಡ್ ಮುಸುಕಿನ ಜೋಳದ ಮೇವು ಸ್ವತಃ ಲಾರಿಗೆ ತುಂಬುವ ಮೂಲಕ ನೆರವಾಗಿದ್ದಾರೆ. ಅಮ್ಮನಿಗೆ ಮಗ ವಿನೋದ್ ರಾಜ್ ಅವರು ಕೂಡ ಸಾಥ್ ನೀಡಿದ್ದಾರೆ. ಸ್ವತಃ ಲೀಲಾವತಿ ಕುಟುಂಬ ಜೋಳವನ್ನು ಕೊಂಡು ಕಟಾವು ಮಾಡಿಸಿ ರವಾನಿಸಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಹಿರಿಯ ನಟಿ ಡಾ.ಲೀಲಾವತಿರ ನೆರವು ಇತರಿರಿಗೂ ಮಾದರಿಯಾಗಿದೆ.
Advertisement
Advertisement
ಈ ಬಗ್ಗೆ ಮಾತನಾಡಿದ ಲೀಲಾವತಿ ಅವರು, ನನ್ನ ಮನಸ್ಸಿನ ನೋವು ತಡೆಯಲಾರದೇ ಬೆಳಗ್ಗೆ 5 ಗಂಟೆಗೆ ಎದ್ದು ಬಂದು ಜನರನ್ನು ಕರೆದುಕೊಂಡು ಬಂದು ಜೋಳದ ಮೇವು ಖರೀದಿ ಮಾಡಿದ್ದೇನೆ. ನಾನು ಕೃಷಿಯಲ್ಲಿದ್ದ ಕಾರಣ ಪ್ರಾಣಿಗಳ ಕಷ್ಟ ಏನು ಎಂದು ನಮಗೆ ಗೊತ್ತಿದೆ. ಹೊಳೆಯಲ್ಲಿ ಮೃತಪಟ್ಟ ಪ್ರಾಣಿಯನ್ನು ನೋಡಿ ಎಲ್ಲರೂ ಸಹಾಯ ಮಾಡಬೇಕು ಎಂಬುದು ನನ್ನ ಆಸೆ. ಎಲ್ಲರೂ ಮನಸ್ಸು ಮಾಡಿ ಪ್ರಾಣಿಗಳ ಮೇಲೆಯೂ ಕನಿಕರ ತೋರಿಸಿ. ನಾನು ತೋರಿಕೆಗಾಗಿ ಇದನ್ನು ಮಾಡಿಲ್ಲ, ಮನಸ್ಸಿನಲ್ಲಿ ನೋವಾಗಿ ಈ ಕೆಲಸ ಮಾಡಿದ್ದೇನೆ. ಬೆಳಗ್ಗೆಯಿಂದ ಕಾದು ಕುಳಿತು ನಾನು ಈ ಕೆಲಸ ಮಾಡಿಸಿದ್ದೇನೆ ಎಂದು ಲೀಲಾವತಿ ಅವರು ಕಣ್ಣೀರು ಹಾಕಿದ್ದಾರೆ.
ಬಳಿಕ ಮಾತನಾಡಿದ ವಿನೋದ್ ರಾಜ್ ಅವರು, ಮಾಧ್ಯಮದವರು ಒಳ್ಳೆದು, ಕೆಟ್ಟದ್ದು, ಎಲ್ಲದ್ದಕ್ಕೂ ನಿಂತು ಅವಮಾನ ಸಹಿಸಿಕೊಂಡು ಕೆಲಸ ಮಾಡುತ್ತಾರೆ. ಮಾಧ್ಯಮಕ್ಕೆ ನಾನು ಅಭಾರಿಯಾಗಿದ್ದೇನೆ. ಏಕೆಂದರೆ ಸರ್ಕಾರಕ್ಕೂ ಮೊದಲು ನಾವು ಇದ್ದೇವೆ ಎಂದು ಹೇಳಿ ಪ್ರಾಣ ಬೇಕಾದರೂ ಕೊಡುತ್ತಾರೆ. ಇಂತಹ ಮಾಧ್ಯಮದವರ ಬಗ್ಗೆ ನನಗೆ ಹೆಮ್ಮೆ ಇದೆ ಹಾಗೂ ಸಂತೋಷ ಕೂಡ ಇದೆ. ಪೊಲೀಸ್ ಅಧಿಕಾರಿ ಕೂಡ ಲಾರಿ ತೆಗೆದುಕೊಂಡು ಬಂದು ನಮಗೆ ಸಹಾಯ ಮಾಡಿದ್ದಾರೆ. ಈ ಸಾಮಾಜಿಕ ಕಳಕಳಿ ಪತ್ರಿ ಕನ್ನಡಿಗ ಹಾಗೂ ಭಾರತೀಯರಿಗೆ ಇರಬೇಕು ಎಂದು ಹೇಳಿದ್ದಾರೆ.