ಬೆಂಗಳೂರು: ಕನ್ನಡದ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾರುಣ್ಯಾ ರಾಮ್ (Karunya Ram) ಅವರು ಸ್ವಂತ ತಂಗಿ ಸಮೃದ್ಧಿ ರಾಮ್ (Samrudhi Ram) ವಿರುದ್ಧವೇ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ತಂಗಿ ಸಮೃದ್ಧಿ ರಾಮ್, ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬುವವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ (CCB Police Station) ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಮೇಕಪ್ ಆರ್ಟಿಸ್ಟ್ ಆಗಿರುವ ಸಹೋದರಿ ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ಆಡಿ ಸುಮಾರು 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವ್ಯವಹಾರದಲ್ಲೂ ಅಪಾರ ನಷ್ಟ ಅನುಭವಿಸಿದ್ದಾರೆ. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ. ಹೀಗಾಗಿ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ಸಾಲ ತೀರಿಸಲು ಬಳಸಿಕೊಂಡು ವಂಚಿಸಿದ್ದಾರೆ.
ಈಕೆ ಮಾಡಿದ ಸಾಲದ ಹಣ ಪಡೆಯಲು ಸಾಲಗಾರರು ಮನೆಗೆ ಬಂದು ಪೀಡಿಸುತ್ತಿ ದ್ದಾರೆ. ನನ್ನ ಹಣವನ್ನು ಬಳಕೆ ಮಾಡಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸಮೃದ್ದಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶ, ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಕಾರುಣ್ಯ ರಾಮ್ ಸಮೃದ್ಧಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಗ ಎನ್‌ಸಿಆರ್ ದಾಖಲಾಗಿತ್ತು. ಈಗ ಕಾರುಣ್ಯ ರಾಮ್ ಸಹೋದರಿ ವಿರುದ್ಧ ಸಿಸಿಬಿಯಲ್ಲಿ ದೂರು ನೀಡಿದ್ದಾರೆ.

