ಕಿರುತೆರೆ ನಟಿ ಜ್ಯೋತಿ ರೈ (Jyoti Rai) ಅಶ್ಲೀಲ ವಿಡಿಯೋ ಪ್ರಕರಣದಿಂದ ನೊಂದಿದ್ದಾರೆ. ಈ ಬೇಸರದ ನಡುವೆಯೂ ಪದ್ಮಶ್ರೀ ವಿಜೇತ ಮೊಗಿಲಯ್ಯ (Mogiliah) ಅವರಿಗೆ ಧನ ಸಹಾಯ ಮಾಡಿದ್ದಾರೆ. ಅವರ ಆರ್ಥಿಕ ಸಂಕಷ್ಟಕ್ಕೆ ನೆರವಾಗಿದ್ದಾರೆ. ನಟಿಯ ನಡೆಗೆ ಅಭಿಮಾನಿಗಳು ಹೊಗಳಿದ್ದಾರೆ.
ಜನಪದ ಗಾಯಕ (Folklorist) ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ತನ್ನ ನೋವನ್ನು ನುಂಗಿ ಜ್ಯೋತಿ ರೈ ಅವರು ಈ ಹಿರಿಯ ಕಲಾವಿದರ ನೆರವಿಗೆ ಧಾವಿಸಿದ್ದಾರೆ.
ಅಕ್ಷಯ ತೃತೀಯ ದಿನದಂದು ಜ್ಯೋತಿ ರೈ ಅವರು ಮೊಗಿಲಯ್ಯ ಅವರಿಗೆ 50 ಸಾವಿರ ರೂ. ಧನ ಸಹಾಯ ನೀಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತು ಎಂದು ಜ್ಯೋತಿ ರೈ ಹೇಳಿದ್ದಾರೆ.
ಮುಂದುವರಿದು, ಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಮೂಡಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹೀಗಾಗಿ ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ನೆರವಾಗೋಣ ಎಂದು ಕರೆ ನೀಡಿದ್ದಾರೆ.
ಈ ಹಿಂದೆ ಪದ್ಮಶ್ರೀ ಮೊಗಿಲಯ್ಯ ಬಹಳ ಒಳ್ಳೆಯ ಜನಪದ ಗಾಯಕರು. ಪವನ್ ಕಲ್ಯಾಣ್ ನಟಿಸಿರುವ ‘ಭೀಮ್ಲಾ ನಾಯಕ್’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಆ ಹಾಡು ಸೂಪರ್ ಹಿಟ್ ಆಗಿದೆ. ಭೀಮ್ಲಾ ನಾಯಕ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಪವನ್ ಕಲ್ಯಾಣ್, ಮೊಗಿಲಯ್ಯಗೆ ಆರ್ಥಿಕ ಸಹಾಯ ಮಾಡಿದ್ದರು.