– ಧನಂಜಯ್ ತೆಲುಗು ಚಿತ್ರದ ನಾಯಕಿ ಇರಾ
ಬೆಂಗಳೂರು: ಈಗ ಟಗರು ಡಾಲಿಯ ಅಬ್ಬರ ತೆಲುಗಿನಲ್ಲಿಯೂ ಶುರುವಾಗಿದೆ. ಸೂರಿ ನಿರ್ದೇಶನದ ಟಗರು ಚಿತ್ರದ ಡಾಲಿ ಪಾತ್ರದ ಪ್ರಭಾವದಿಂದಲೇ ಧನಂಜಯ್‍ಗೆ ತೆಲುಗಿನ `ಭೈರವ ಗೀತ’ ಚಿತ್ರದಲ್ಲಿ ನಾಯಕನಾಗಿ ನಟಿಸೋ ಅವಕಾಶ ಒದಗಿ ಬಂದಿದೆ. ಮೊನ್ನೆಯಷ್ಟೇ ಚಿತ್ರೀಕರಣ ಶುರುವಿಟ್ಟುಕೊಂಡಿರೋ ಈ ಚಿತ್ರಕ್ಕೆ ತೆಲುಗು ನಟಿ ಇರಾ ನಾಯಕಿಯಾಗಿ ಆಗಮಿಸಿದ್ದಾಳೆ!
ಭೈರವನಿಗೆ ಗೀತಾ ಆಗಿ ಜೊತೆಯಾಗಲಿರೋ ಇರಾ, ರಾಮ್ ಗೋಪಾಲ್ ವರ್ಮಾ ಪರಿಚಯಿಸಿದ್ದ ಪ್ರತಿಭೆ. ಆರ್‍ಜಿವಿ ಪ್ರೊಡಕ್ಷನ್ ಚಿತ್ರದ ಮೂಲಕವೇ ನಟಿಯಾಗಿದ್ದ ಇರಾಳನ್ನು ವರ್ಮಾ ಸ್ವತಃ ಈ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ವರ್ಮಾ ಮತ್ತು ಭಾಸ್ಕರ್ ಸೇರಿಕೊಂಡು ನಿರ್ಮಾಣ ಮಾಡುತ್ತಿರೋ ಈ ಚಿತ್ರವನ್ನು ಅವರ ಶಿಷ್ಯ ಸಿದ್ಧಾರ್ಥ ನಿರ್ದೇಶನ ಮಾಡುತ್ತಿದ್ದಾರೆ.
ಆರ್‍ಜಿವಿ ಈ ಹಿಂದೆ ಬೆಂಗಳೂರಿನ ಒರಾಯನ್ ಮಾಲಿಗೆ ಆಗಮಿಸಿ ಟಗರು ಚಿತ್ರ ನೋಡಿದ್ದರು. ಅದರಲ್ಲಿನ ಡಾಲಿ ಪಾತ್ರವನ್ನು ಮತ್ತು ಅದರೆಲ್ಲಿ ನಟಿಸಿದ್ದ ಧನಂಜಯ್‍ನನ್ನು ಮೆಚ್ಚಿಕೊಂಡಿದ್ದ ಆರ್‍ಜಿವಿ ಆ ಕ್ಷಣವೇ ಭೈರವ ಗೀತಾ ಚಿತ್ರಕ್ಕೆ ಮುಹೂರ್ತವಿಟ್ಟಿದ್ದರು. ಈ ಒಂದು ಪಾತ್ರದ ಮೂಲಕವೇ ಧನಂಜಯ್ ನಟನಾ ಚಾತುರ್ಯವನ್ನು ಗಮನಿಸಿರುವ ವರ್ಮಾ ಅದಕ್ಕೆ ತಕ್ಕುದಾದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.
ಈಗಾಗಲೇ ಭೈರವ ಗೀತ ಚಿತ್ರದ ಚಿತ್ರೀಕರಣ ಶುರುವಾಗಿದೆ. ಹೈದ್ರಾಬಾದಿನ ಹಳ್ಳಿಯೊಂದರಲ್ಲಿ ಚಿತ್ರ ತಂಡ ಬೀಡು ಬಿಟ್ಟು ಧನಂಜಯ್ ಭಾಗದ ಚಿತ್ರೀಕರಣವನ್ನು ನಡೆಸುತ್ತಿದೆ. ಧನಂಜಯ್ ಲುಂಗಿ ಬನಿಯನ್ನಿನ ರಗಡ್ ಲುಕ್ಕಿನಲ್ಲಿ ಮಿಂಚುತ್ತಿದ್ದಾರೆ. ಇದು ತೆಲುಗಿನಲ್ಲಿ ಧನಂಜಯ್ ಪಾಲಿಗೆ ಮೊದಲ ಚಿತ್ರ. ಈ ಚಿತ್ರದ ಮೊದಲ ದಿನದ ಚಿತ್ರೀಕರಣ ಮೊದಲ ದಿನ ಶಾಲೆಗೆ ಹೋದಂತೆಯೇ ಇತ್ತು ಅಂದಿರುವ ಧನಂಜಯ್ ಈ ಚಿತ್ರದ ಮೂಲಕ ತೆಲುಗಿನಲ್ಲಿಯೂ ನೆಲೆ ಕಂಡುಕೊಳ್ಳುವ ಲಕ್ಷಣಗಳಿದ್ದಾವೆ!
Here is the first look of my next film #BhairavaGeetha with debutant director Siddarth, a @RGVzoomin Production. pic.twitter.com/ZmS3amaCcA
— Gurudev Hoysala (@Dhananjayaka) June 21, 2018