ಹಿಂದಿ ಕಿರುತೆರೆ ನಟಿ ಹಿನಾ ಖಾನ್‌ಗೆ (Hina Khan) ಸ್ತನ ಕ್ಯಾನ್ಸರ್ (Breast Cancer) ಮೂರನೇ ಹಂತದಲ್ಲಿದೆ. ಅದಕ್ಕೆ, ನಟಿ ಸೂಕ್ತ ಚಿಕಿತ್ಸೆ ಕೂಡ ಪಡೆದುಕೊಳ್ತಿದ್ದಾರೆ. ಇದರ ನಡುವೆ ನಟಿ ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ್ದಾರೆ. ಈ ವಿಡಿಯೋವನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಚಿತ್ರದ ಟೀಸರ್ ಔಟ್
ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರು ನನ್ನ ಹೋರಾಟಕ್ಕೆ ದೊಡ್ಡ ಭರವಸೆ. ನಾನು ಗೆದ್ದು ಬರುತ್ತೇನೆ ಎಂದು ಕೂದಲನ್ನು ಕಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ನಟಿ ಹಂಚಿಕೊಂಡಿದ್ದಾರೆ. ಹಿನಾ ಕೂದಲನ್ನು ಕತ್ತರಿಸುವಾಗ ಅವರ ತಾಯಿ ಭಾವುಕರಾಗಿದ್ದಾರೆ. ಈ ವಿಡಿಯೋ ನೋಡಿದ ನಟಿಯ ಫ್ಯಾನ್ಸ್, ಬೇಗ ಗುಣಮುಖರಾಗಿ ಬರಲಿ ಎಂದು ಆಶಿಸುತ್ತಿದ್ದಾರೆ.
ಅಂದಹಾಗೆ, ಕಳೆದ ವಾರ ನಟಿ ಆರೋಗ್ಯದ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಕೇಳಿಬಂದ ಕೆಲವು ವದಂತಿಗಳನ್ನು ಪರಿಹರಿಸಲು ನಾನು ಬಯಸುತ್ತೇನೆ. ನನ್ನನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನನಗೆ 3ನೇ ಹಂತದ ಸ್ತನ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ ಎಂದಿದ್ದರು. ಈ ಕಾಯಿಲೆ ಇದ್ದರೂ ನಾನು ಉತ್ತಮವಾಗಿದ್ದೇನೆ. ನನ್ನ ಚಿಕಿತ್ಸೆಯು ಈಗಾಗಲೇ ಪ್ರಾರಂಭವಾಗಿದೆ. ಇದರಿಂದ ಹೊರಬರಲು ಅಗತ್ಯವಿರುವ ಎಲ್ಲ ಕೆಲಸವನ್ನು ಮಾಡಲು ನಾನು ಸಿದ್ಧಳಿದ್ದೇನೆ ಎಂದು ಹಿನಾ ಖಾನ್ ಹೇಳಿದ್ದರು.
ಈ ಸಮಯದಲ್ಲಿ ನನ್ನ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಪ್ರೀತಿ, ಶಕ್ತಿ ಮತ್ತು ಆಶೀರ್ವಾದವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ. ನಾನು, ನನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ ಧನಾತ್ಮಕವಾಗಿ ಇರುತ್ತೇನೆ. ಸರ್ವಶಕ್ತನ ಅನುಗ್ರಹದಿಂದ, ನಾನು ಈ ಸವಾಲನ್ನು ಜಯಿಸುತ್ತೇನೆ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿರುತ್ತೇನೆ ಎಂದು ನಾನು ನಂಬಿದ್ದೇನೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಕಳೆದ 16 ವರ್ಷಗಳಿಂದ ಕಿರುತೆರೆಯಲ್ಲಿ ನಟಿ ಗುರುತಿಸಿಕೊಂಡಿದ್ದಾರೆ. ಸಿನಿಮಾ, ಸಾಲು ಸಾಲು ಸೀರಿಯಲ್‌ಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.