ಉಡುಪಿ: ಮಲ್ಪೆ ಕಡಲ ತೀರದಿಂದ ತ್ರಿಭುಜ ಹೆಸರಿನ ಹಡಗಿನೊಂದಿಗೆ ನಾಪತ್ತೆಯಾದ ಏಳು ಮೀನುಗಾರರನ್ನು ಹುಡುಕೋದಕ್ಕೆ ಆಗಲ್ವ? ಪ್ರಧಾನಿ ಮೋದಿ ಬಳಿ ಇರುವ ದೊಡ್ಡ ದೊಡ್ಡ ಕ್ಷಿಪಣಿ ಏನಕ್ಕದು? ಎಂದು ಉಡುಪಿ ಪ್ರಭಾವಿ ಮೀನುಗಾರ ಮುಖಂಡರೊಬ್ಬರು ಬಿಜೆಪಿ ನಾಯಕರಿಗೆ ಮಾತಿನ ಚಾಟಿ ಬೀಸಿದ್ದಾರೆ.
ಮೀನುಗಾರರ ಮುಖಂಡರು ಹಾಗೂ ಗುತ್ತಿಗೆದಾರರು ಆಗಿರುವ ಡಾ. ಜಿ.ಶಂಕರ್ ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಪ್ರಚಾರ ಸಭೆ ಮುಗಿಸಿ ನಟಿ ತಾರಾ ಬಗ್ವಾಡಿ ದೇವಸ್ಥಾನಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ.
ನಟಿ ತಾರಾ ಅವರು ಪ್ರಚಾರ ಸಭೆಯ ಭಾಷಣದಲ್ಲಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ ಅವರು ಅಲ್ಲಿಂದ ತೆರಳಿದ ವೇಳೆ ಧಾರ್ಮಿಕ ಸಭೆಯ ವೇದಿಕೆ ಬಳಿ ಶಂಕರ್ ಹಾಗೂ ಬಿಜೆಪಿ ಶಾಸಕ ಸುಕುಮಾರ ಅವರು ಎದುರಾಗಿದ್ದರು. ಈ ವೇಳೆ ಶಾಸಕರನ್ನು ಪ್ರಶ್ನೆ ಮಾಡಿದ ಶಂಕರ್ ಅವರು, ಯಾರೇ ಆಗಲಿ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುದಿಲ್ಲಾ ಇನ್ನು. ನಿಮಗೆ ನೆತ್ತಿಗೆ ಏರಿದೆಯೇ, ಕಾಂಗ್ರೆಸ್ ನವರನ್ನು ಬಿಡಿ. ನೀವು ಏನು ಮಾಡಿದ್ದೀರಿ ಹೇಳಿ. ನಾನು ನಿಮ್ಮ ಗುರು ಮಾಜಿ ಸಿಎಂ ಯಡಿಯೂರಪ್ಪ ನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು, ಹಾಗೆಯೇ ನನ್ನ ಗುರುಗಳು ಆದರೆ ಕೆಲಸ ಮಾಡಬೇಕಾಗಿತ್ತಲ್ಲಾ. ಕರಾವಳಿಯವರ ಮತಗಳು ನಿಮಗೇ ಬೇಡವೇ? ಕೆಲಸ ಮಾಡಲ್ವಾ? ನೀವು ಬಂದು ಏನು ಮಾಡಿದ್ದೀರಿ ಹೇಳಿ? ಮೀನುಗಾರರಿಗೆ 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ಟಿದ್ದೀರಾ? ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ ಎಂದು ಹೇಳ್ತೀರಿ, ಮೂರು ತಿಂಗಳಿಂದ ಕಳೆದು ಹೋದ ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಕಂಡ ಇತರೇ ಮುಖಂಡರು, ಶಾಸಕ ಸುಕುಮಾರ ಶೆಟ್ಟಿ, ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರ ಮುಖಂಡರು ಜಿ. ಶಂಕರ್ ಅವರನ್ನು ಸಂತೈಸಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪ ಪ್ರತ್ಯಾರೋಪ ಮಾಮೂಲಿ. ನಿಮ್ಮ ಕೆಲಸಗಳನ್ನು ಮಾಡಿಕೊಡುವ ಎಂದು ಹೇಳಿದ್ದಾರೆ.