ವಿಷ್ಣುವರ್ಧನ್ (Vishnuvardhan) 15ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಣುವರ್ಧನ್ ಪ್ರತಿಮೆಗೆ ಕುಟುಂಬಸ್ಥರು ನಮನ ಸಲ್ಲಿಸಿದರು. ಈ ವೇಳೆ, ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿ, ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ ಎಂದು ಭಾರತಿ ವಿಷ್ಣುವರ್ಧನ್ ಮಾತನಾಡಿದರು. ಇದನ್ನೂ ಓದಿ:ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ
ಸಾಹಸಸಿಂಹ ವಿಷ್ಣುವರ್ಧನ್ ವಿಧಿವಶರಾಗಿ ಇಂದಿಗೆ 15 ವರ್ಷ ಕಳೆದಿದೆ. ಆದರೆ ಇನ್ನೂ ಕೂಡ ಸ್ಮಾರಕ ವಿವಾದ ಮುಗಿದಿಲ್ಲ. ಅಭಿಮಾನಿ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಇದ್ದರೂ, ಕೋರ್ಟ್‌ನಲ್ಲಿ ತಡೆ ಇರೋದ್ರಿಂದ ಅಭಿಮಾನಿಗಳಿಗೆ ಪೊಲೀಸರು ಪೂಜೆಗೆ ಅವಕಾಶ ಕೊಡಲಿಲ್ಲ. ಸಮಾಧಿ ಸ್ಥಳದಿಂದ ದೂರದಿಂದಲೇ ಪೂಜೆ ಸಲ್ಲಿಸಲು ಅವಕಾಶ ಕೊಟ್ಟಿದ್ದರಿಂದ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಸಮಾಧಿಗೆ ಪೂರ್ತಿ ಹೂವು ಅಲಂಕರಿಸಲು ಅವಕಾಶ ಕೊಟ್ಟಿಲ್ಲ. ವಿಷ್ಣುವರ್ಧನ್ ಅವರ ಭಾವಚಿತ್ರ ಹಾಕಲು ಬಿಟ್ಟಿಲ್ಲ. ದೂರದ ಊರಿನಿಂದ ಬಂದಿದ್ದೇವೆ ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ, ಪ್ರತಿಬಾರಿಯಂತೆ ಈ ಬಾರಿಯೂ ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ ಯಾವುದೇ ಕಾರಣಕ್ಕೂ ನಮಗೆ ಸ್ಮಾರಕ ಬೇಡ. ಅಂತ್ಯಕ್ರಿಯೆ ನಡೆದ ಈ ಜಾಗವೇ ನಮಗೆ ಪುಣ್ಯಸ್ಥಳ. ಅಂತ್ಯಕ್ರಿಯೆ ನಡೆದ ಈ ಜಾಗವನ್ನು ನಮಗೆ ಬಿಟ್ಟುಕೊಡಿ ಅಂತ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇವೆಲ್ಲದರ ಮಧ್ಯೆ, ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಯುವರ್ಧನ್‌ಗೆ ನಮನ ಸಲ್ಲಿಸಲಾಗಿದೆ. ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ್ ವಿಷುವರ್ಧನ್ ಪ್ರತಿಮೆಗೆ ನಮನ ಸಲ್ಲಿಸಿದ್ದರು. ಬಳಿಕ ಮಾಧ್ಯಮಕ್ಕೆ ಭಾರತಿ ಪ್ರತಿಕ್ರಿಯಿಸಿ, ಭವಿಷ್ಯದಲ್ಲಿ ವಿಷ್ಣು ಅವರ ಒಳ್ಳೆಯ ಸ್ಮಾರಕ ತಲೆ ಎತ್ತಲಿದೆ. ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ. ದೇವರು ನಡೆಸಿದಂತೆ ಆಗುತ್ತದೆ ಅಂತ ಸ್ಮಾರಕ ನಿರ್ಮಾಣವನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ನಲ್ಲಿ ವಿಷ್ಣು ವಿಧಿವಶರಾಗಿ 15 ವರ್ಷ ಕಳೆದಿದ್ದರೂ, ಸ್ಮಾರಕ ವಿಚಾರದಲ್ಲಿ ಕಿತ್ತಾಟ ನಡೆಯುತ್ತಿರೋದು ದುರಂತವೇ ಸರಿ.
ಇಂದು ಅಪ್ಪಾಜಿ ಅವರ 15ನೇ ವರ್ಷದ ಪುಣ್ಯ ಸ್ಮರಣೆಯಾಗಿದ್ದು, ನಮ್ಮ ಕುಟುಂಬದ ಪರವಾಗಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ನನ್ನ ಪಾಲಿಗೆ ಮಾಸ್ ಹೀರೋ ಒಬ್ಬರೆ, ಅದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಎಂದರು. ಈ ರೀತಿ ಯಾವುದೇ ಯುದ್ಧಗಳು ಆಗಬಾರದು. ನಾವೆಲ್ಲ ಒಂದೇ ಕುಟುಂಬವಿದ್ದಂತೆ. ಈ ರೀತಿ ಯುದ್ಧಕ್ಕೆ ಅವಕಾಶ ಕೊಡಬಾರದು. ಆದರೆ ಅಭಿಮಾನಿಗಳು ಅವರ ಅಭಿಮಾನವನ್ನ ಬೇರೆ ಬೇರೆ ರೀತಿ ತೋರಿಸಿಕೊಳ್ಳುತ್ತಾರೆ. ಕಲಾವಿದರು ನಾವೆಲ್ಲ ಒಂದೇ ಕುಟುಂಬ ಇದ್ದಹಾಗೆ. ಆದಷ್ಟು ಯುದ್ಧ ಹೋರಾಟ ಕಮ್ಮಿ ಮಾಡಿ, ಜೊತೆಗೆ ಪ್ರೀತಿಯನ್ನ ಎಲ್ಲರೂ ಹಿಂಚಿಕೆ ಮಾಡಿ ಎಂದು ಅನಿರುದ್ಧ್ ಮನವಿ ಮಾಡಿದರು. ಅದರಿಂದ ನಮ್ಮ ಚಿತ್ರರಂಗ ಬೆಳೆಯುತ್ತದೆ. ಬೇರೆ ರಾಜ್ಯಗಳಿಗೂ ನಾವು ಮಾದರಿ ಆಗುತ್ತೇವೆ ಎಂದರು.