ಬೆಂಗಳೂರು: ಮಹಿಳಾ ಸಂಘದ ಹಣಕ್ಕಾಗಿ ನಟಿಯೊಬ್ಬರು ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿಸಿ, ಕಾರು ಹಾಗೂ ಹಣವನ್ನು ಸುಲಿಗೆ ಮಾಡಿದ ಘಟನೆ ಬಸವೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಘು ಹಲ್ಲೆಗೊಳಗಾದ ಕಾರ್ಯಕರ್ತ. ಚಿತ್ರನಟಿ ಸುಷ್ಮಿತಾ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಆದಿಶಕ್ತಿ ಮಹಿಳಾ ಸಂಘವನ್ನು ಉದ್ಘಾಟನೆ ಮಾಡಿದ್ದರು. ಸಂಘದ ಹೆಸರಿನಲ್ಲಿ ರಾಜ್ಯಾದ್ಯಂತ ಶಾಖೆಗಳನ್ನು ತೆರೆಯಲು ಹಣವನ್ನು ಸಂಗ್ರಹ ಮಾಡುತ್ತಿದ್ದರು. ರಘು ತಾನೊಬ್ಬನೇ ಹಣ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿ ಕಳೆದ ಸೆಪ್ಟೆಂಬರ್ 2ನೇ ತಾರೀಖಿನಂದು ಬಸವೇಶ್ವರನಗರದ ಮುಖ್ಯರಸ್ತೆಯಲ್ಲಿ ರಘುವಿನ ಕಾರನ್ನು ಅಡ್ಡಗಡ್ಡಿ ಕಾರು, ಹಣ ಸೇರಿದಂತೆ ಲ್ಯಾಪ್‍ಟಾಪ್ ದೋಚಿಕೊಂಡು ಹೋಗಿದ್ದಲ್ಲದೇ ಪ್ರಾಣ ಬೆದರಿಕೆಯನ್ನು ಹಾಕಿದ್ದರು.
ಹಲ್ಲೆಗೊಳಗಾದ ರಘು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಚಿತ್ರನಟಿ ಸುಷ್ಮಿತಾ ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ದೂರನ್ನು ನೀಡಿದ್ದಾರೆ. ಸಂಘದ ಎಲ್ಲಾ ಹೊಣೆಯನ್ನು ನಾನೊಬ್ಬನೇ ಹೊತ್ತಿಕೊಳ್ಳಲು ಸಾಧ್ಯವಿಲ್ಲ, ಸಂಘಕ್ಕೆ ಬರುತ್ತಿದ್ದ ಹಣದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ. ಆದರೆ ಏಕಾಏಕಿ ಸುಷ್ಮಿತಾ ತಾವು ನೀಡಿದ್ದ ಹಣವನ್ನು ಹಿಂದಿರುಗಿಸು, ಇದರಲ್ಲಿ ನೀನೊಬ್ಬನೇ ಹಣ ಮಾಡಿಕೊಳ್ಳುತ್ತಿದ್ದೀಯಾ ಎಂದು ಆರೋಪಿಸಿ ನನ್ನ ಮೇಲೆ ಹಲ್ಲೆ ನಡೆಸಿ ಕಾರು, ಹಣ ಹಾಗೂ ಲ್ಯಾಪ್‍ಟಾಪ್ ಸೇರಿದಂತೆ ಇತರೆ ವಸ್ತುಗಳನ್ನು ದೋಚಿದ್ದಾರೆ. ನನಗೆ ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv