ಕಿರುತೆರೆಯ ಖ್ಯಾತ ಕಲಾವಿದೆ, ನಿರೂಪಕಿ ಅನುಪಮಾ ಗೌಡ (Anupama Gowda) ಕಳಪೆ ಹಣೆಪಟ್ಟಿ ಕಟ್ಟಿಕೊಂಡು ಜೈಲು ಸೇರಿದ್ದಾರೆ. ಮನೆಯ ಬಹುತೇಕ ಸದಸ್ಯರೇ ಇವರ ವಿರುದ್ಧ ತಿರುಗಿ ಬಿದ್ದಿದ್ದರಿಂದ ಕಳಪೆ ಹಣೆಪಟ್ಟಿಯ ಜೊತೆಗೆ ಜೈಲು ಸೇರುವುದು ಅನಿವಾರ್ಯವಾಗಿದೆ. ಹಾಗಂತ ಅವರೇನು ನೊಂದುಕೊಂಡಿಲ್ಲ. ಬಂದಿರುವ ಸ್ಥಿತಿಯನ್ನು ಅನುಭವಿಸಬೇಕಾಗಿದೆ. ಹಾಗಾಗಿ ಈ ವಾರದಲ್ಲಿ ಅವರು ಎಷ್ಟು ದಿನಗಳ ಕಾಲ ಜೈಲಿನಲ್ಲಿ ಇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಂದಹಾಗೆ, ಅನುಪಮಾ ಗೌಡ ಈ ವಾರ ಬಿಗ್ ಬಾಸ್ (Big Boss) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಅನುಪಮಾ ಕ್ಯಾಪ್ಟನ್ (Captain) ಆಗುತ್ತಿದ್ದಂತೆಯೇ ಎಲ್ಲವನ್ನೂ ಅವರು ಸರಿಯಾದ ರೀತಿಯಲ್ಲೇ ನಿಭಾಯಿಸುತ್ತಾರೆ ಅಂದುಕೊಳ್ಳಲಾಗಿತ್ತು. ಆದರೆ, ಅನುಪಮಾ ಮನೆಯಲ್ಲಿದ್ದವರ ಮನಸ್ಸನ್ನು ಕದಿಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ, ಇವರ ಕ್ಯಾಪ್ಟೆನ್ಸಿಯಲ್ಲಿ ಸಾಕಷ್ಟು ಗಲಾಟೆಗಳು ಆಗಿದ್ದರಿಂದ, ಟಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದೇ ಇರುವ ಕಾರಣಕ್ಕಾಗಿ ಅವರು ಕಳಪೆ (Poor) ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಾಯಿತು. ಇದನ್ನೂ ಓದಿ:`ಅವತಾರ್ 2′ ಟ್ರೈಲರ್ ಟ್ರೆಂಡಿಂಗ್ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ
ಈ ವಾರ ಅನುಪಮಾ ಮತ್ತು ರೂಪೇಶ್ ರಾಜಣ್ಣ (Rupesh Rajanna) ನಡುವೆ ದೊಡ್ಡದೊಂದು ಗಲಾಟೆಯೇ ನಡೆದು ಹೋಯಿತು. ತಾವು ಈ ಮನೆಯಲ್ಲಿ ಇರುವುದಕ್ಕೆ ಸಾಧ್ಯವೇ ಇಲ್ಲವೆಂದು ಬ್ಯಾಗ್ ತಗೆದುಕೊಂಡು ಮನೆಯಿಂದ ಹೊರಹೋಗುವ ಪ್ರಯತ್ನ ಮಾಡಿದರು ರೂಪೇಶ್. ಬಿಗ್ ಬಾಸ್ ಮನೆಯ ಇತರ ಸದಸ್ಯರು ಸಮಾಧಾನ ಮಾಡಿದ್ದರಿಂದ ಮತ್ತೆ ಅವರು ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡರು. ಅದರಂತೆ, ಅನುಪಮಾ ತಮಗೆ ಬೇಕಾದವರಿಗೆ ಮಾತ್ರ ಸಪೋರ್ಟ್ ಮಾಡುತ್ತಾರೆ ಎಂದು ಹೇಳಲಾಯಿತು. ಅದನ್ನು ಅವರು ನಿರಾಕರಿಸಿದರು.
ಅನುಪಮಾ ಗೌಡ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುತ್ತಿದ್ದಂತೆಯೇ ಮನೆಯಲ್ಲಿ ಹೊಸ ವಾತಾವರಣ ಸಿಗಲಿದೆ ಎಂದೇ ಹೇಳಲಾಗಿತ್ತು. ಈಗಾಗಲೇ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದು, ಇದು ಎರಡನೇ ಬಾರಿಯ ಪಯಣವಾಗಿದ್ದರಿಂದ, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಆಟವಾಡಲಿದ್ದಾರೆ ಎಂದೂ ನಂಬಲಾಗಿತ್ತು. ಆದರೆ, ಕ್ಯಾಪ್ಟನ್ ವಿಷಯದಲ್ಲಿ ಅವರು ಎಡವಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳುವಲ್ಲಿ ಸೋತಿದ್ದಾರೆ.