ಹೈದರಾಬಾದ್: ನಟಿ ಅಮಲಾ ಪೌಲ್ ಮಾಜಿ ಪತಿ ನಿರ್ದೇಶಕ ಎ.ಎಲ್ ವಿಜಯ್ ಎರಡನೇ ಮದುವೆಯಾಗಿದ್ದಾರೆ. ಇದರ ಬೆನ್ನಲ್ಲೇ ಹೆಬ್ಬುಲಿ ನಟಿ ಅಮಲಾ ಪೌಲ್ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ನಿರ್ದೇಶಕ ವಿಜಯ್ ಅವರು ಚೆನ್ನೈ ಮೂಲದ ವೈದ್ಯೆ ಐಶ್ವರ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಶ್ವರ್ಯ ಅವರು ಮನ್ನಿವಕ್ಕಂನಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ಅಮಲಾ ಕೂಡ ಎರಡನೇ ಮದುವೆಯಾಗಲು ಸಿದ್ಧರಾಗುತ್ತಿದ್ದು, ನಾನು ಕೂಡ ಪ್ರೀತಿಯಲ್ಲಿದ್ದೀನಿ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
“ಅನೇಕ ದಿನಗಳಿಂದ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಆದರೆ ಅವರು ಸಿನಿಮಾರಂಗದಲ್ಲಿ ಇಲ್ಲ. ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ನಾವಿಬ್ಬರು ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ನಾನು ಸಿನಿಮಾ ಕೆರಿಯರ್ ಕಡೆ ಮಾತ್ರ ಗಮನ ಕೊಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಅಮಲಾ ಪೌಲ್ ಪ್ರೀತಿ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಆ ವ್ಯಕ್ತಿ ಯಾರು ಎಂದು ಮಾತ್ರ ರಿವೀಲ್ ಮಾಡಿಲ್ಲ.
ಅಮಲಾ ಅವರು ಇತ್ತೀಚೆಗೆ ‘ಅದಾಯಿ’ ಸಿನಿಮಾದ ಟೀಸರಿನಲ್ಲಿ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಟ್ರೋಲ್ ಆಗಿದ್ದರು
. ಬಳಿಕ ಸಂದರ್ಶನವೊಂದರಲ್ಲಿ, ನಾನು ವಿಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ. ನಶೆಯಲ್ಲಿ ನಾಪತ್ತೆಯಾಗುವ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದ ಮೊದಲು ನಾನು ಅತ್ಯಾಚಾರ ಸಂತ್ರಸ್ತೆ, ಹೋರಾಟ ಮಾಡುವ ಮಹಿಳೆ, ತಂಗಿ ಹಾಗೂ ತಾಯಿಯ ಪಾತ್ರದಲ್ಲಿ ನಟಿಸಿ ಬೋರ್ ಆಗಿತ್ತು. ಇದರಿಂದಾಗಿ ನನಗೆ ಬೋರ್ ಆಗಿ ಸಿನಿಮಾ ರಂಗವನ್ನು ಬಿಡಲು ಮುಂದಾಗಿದ್ದೆ. ಚಿತ್ರದಲ್ಲಿ ಇದು ವಿಶೇಷ ಪಾತ್ರ ಅನಿಸಿದ್ದಕ್ಕೆ ಅಭಿನಯಿಸಲು ಒಪ್ಪಿಕೊಂಡೆ ಎಂದು ಹೇಳಿದ್ದರು.
ವಿಚ್ಛೇದನ:
ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಪ್ರೀತಿಸಿ 2014ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಇಬ್ಬರು ಮದುವೆ ಕೂಡ ಆಗಿದ್ದರು. ಆದರೆ ಅಮಲಾ ಮತ್ತು ವಿಜಯ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರು 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಫೆಬ್ರವರಿ 2017ರಲ್ಲಿ ಅವರಿಗೆ ವಿಚ್ಛೇದನ ಪಡೆದಿದ್ದರು.