ಕನ್ನಡದ ನಟ, ನಟಿಯರು ಬೇರೆ ಭಾಷೆಗಳಲ್ಲಿ ಮಿಂಚುವುದು ಹೊಸತೇನಲ್ಲ. ಆದರೆ, ಬೇರೆ ಭಾಷೆಗಳಲ್ಲಿ ಜನಪ್ರಿಯತೆ ದಕ್ಕಿದ ಮೇಲೂ ಕನ್ನಡತನವನ್ನೇ ಧ್ಯಾನಿಸುತ್ತಾ, ತಾಯ್ನೆಲದ ಪ್ರೇಕ್ಷಕರನ್ನು ಚೆಂದದ ಪಾತ್ರಗಳ ಮೂಲಕ ತಾಕೋದನ್ನೇ ಪ್ರಧಾನ ಆದ್ಯತೆಯಾಗಿಸಿಕೊಂಡವರ ಸಂಖ್ಯೆ ಕಡಿಮೆಯಿದೆ. ಆ ಸಾಲಿಗೆ ಅಕ್ಷಿತಾ ಬೋಪಯ್ಯ ಸೇರಿದ್ದಾರೆ.
Advertisement
ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿರುವ ಅಕ್ಷಿತಾ, ಕಾಲದ ಸೆಳವಿಗೆ ಸಿಕ್ಕು ತಮಿಳು ಸೀರಿಯಲ್ ಜಗತ್ತಿಗೆ ಅಡಿಯಿರಿಸಿದ್ದರು. ಈವತ್ತಿಗೆ ಆಕೆಯ ಪಾಲಿಗೆ ತಮಿಳು ಕಿರುತೆರೆಯಲ್ಲಿ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನೂ ಸಂಪಾದಿಸಿಕೊಂಡಿರುವ ಅಕ್ಷಿತಾ (Akshitha Bopaiah) ಈಗ ತಮಿಳು ಚಿತ್ರವೊಂದರ ಮೂಲಕ ನಾಯಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್
Advertisement
Advertisement
ಬ್ರಹ್ಮಚಾರಿ, ಈ ಲವ್ ಯೂ, ಶಿವಾರ್ಜುನ ಮುಂತಾದ ಚಿತ್ರಗಳ ಮೂಲಕ ಅಕ್ಷಿತಾ ಕನ್ನಡದ ಪ್ರೇಕ್ಷಕರಿಗೆಲ್ಲ ಪರಿಚಿತರಾಗಿದ್ದಾರೆ. ಈ ನಡುವೆ ತಮಿಳು ಸೀರಿಯಲ್‌ಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಭಾರೀ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ. ಹಾಗೆ ಅಕ್ಷಿತಾ ನಟಿಸುತ್ತಿದ್ದ ಪ್ರಸಿದ್ಧ ತಮಿಳು ಧಾರಾವಾಹಿ ನಾಲಕ್ಕು ತಿಂಗಳ ಹಿಂದೆ ಮುಕ್ತಾಯಗೊಂಡಿತ್ತು. ಅದಾದ ನಂತರ ಸೀರಿಯಲ್ಲುಗಳ ಅವಕಾಶವಿದ್ದರೂ ಕೂಡಾ ಅಕ್ಷಿತಾರ ಆಸಕ್ತಿ ಹೊರಳಿಕೊಂಡಿದ್ದದ್ದು ಸಿನಿಮಾ ರಂಗದತ್ತ. ತಮಿಳು ಕಿರುತೆರೆ ಜಗತ್ತಿನ ಮುಖ್ಯ ನಾಯಕಿಯಾಗಿ ದಾಖಲಾಗಿದ್ದ ಅಕ್ಷಿತಾ, ಸಿನಿಮಾದಲ್ಲಿ ನಟಿಸುವ ಮೂಲಕ ಏಕತಾನತೆಯನ್ನು ದಾಟಿಕೊಳ್ಳುವ ನಿರ್ಧಾರ ಮಾಡಿದ್ದರು.
Advertisement
ಅಂಥಾ ಹೊತ್ತಿನಲ್ಲಿ ತಮಿಳಿನಲ್ಲೊಂದು (Kollywood) ಚೆಂದದ ಅವಕಾಶ ಸಿಕ್ಕಿದೆ. ಕನ್ನಡದ ‘ಸಿದ್ಲಿಂಗು-2’ ಚಿತ್ರವನ್ನು ನಿರ್ಮಾಣ ಮಾಡಿದ್ದ ಬ್ಯಾನರಿನಲ್ಲಿಯೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ರೂಪುಗೊಳ್ಳಲಿದೆ. ವಿಶೇಷವೆಂದರೆ, ಅಕ್ಷಿತಾ ಬಯಸಿದಂಥಾ ಪಾತ್ರವೇ ಇಲ್ಲಿ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗೆಗಾಗಲಿ, ಅಕ್ಷಿತಾರ ಪಾತ್ರದ ಬಗೆಗಾಗಲಿ ಹೆಚ್ಚೇನೂ ಮಾಹಿತಿ ಜಾಹೀರು ಮಾಡುವಂತಿಲ್ಲ. ಆದರೆ, ಒಂದೊಳ್ಳೆಯ ತಂಡ, ಹೊಸತೆನ್ನಿಸುವಂಥಾ ಕಥಾನಕದೊಂದಿಗೆ ಈ ಸಿನಿಮಾ ತಯಾರಾಗುತ್ತಿರುವ ಬಗ್ಗೆ ಅಕ್ಷಿತಾರೊಳಗೊಂದು ಖುಷಿ ಇದೆ. ಸದ್ಯ ಕೊಡಗಿನ ಸುತ್ತಮುತ್ತ ಸದರಿ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ.
ತಮಿಳು ಒಂದು ಹಂತದಲ್ಲಿ ಅಕ್ಷಿತಾ ಪಾಲಿಗೆ ಗುರುತಿರದ ಭಾಷೆಯಾಗಿತ್ತು. ಆ ಭಾಷೆಯಲ್ಲೇ ಧಾರಾವಾಹಿಯೊಂದರ ನಾಯಕಿಯಾಗೋ ಅವಕಾಶ ಕೂಡಿ ಬಂದಾಗ, ಪ್ರತಿಭೆಯ ಬಲದಿಂದಲೇ ಅದನ್ನು ತಮ್ಮದಾಗಿಸಿಕೊಂಡಿದ್ದವರು ಅಕ್ಷಿತಾ. ಹಾಗೆ ತಮಿಳು ಕಿರುತೆರೆಗೆ ತೆರಳಿ ಅಲ್ಲಿನ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರುವ ಅಕ್ಷಿತಾ ಪಾಲಿಗೆ, ಅಲ್ಲಿಯೇ ನಟಿಯಾಗಿ ನೆಲೆಗಾಣುವ ವಿಪುಲ ಅವಕಾಶಗಳಿದ್ದಾವೆ. ಆದರೂ ಕೂಡಾ ಕನ್ನಡ ಚಿತ್ರರಂಗವೇ ತನ್ನ ಪಾಲಿನ ಖಾಯಂ ನೆಲೆ ಅಂದುಕೊಂಡಿರುವ ಅವರು, ಈಗಾಗಲೇ ಕರ್ನಾಟಕದ ಅಳಿಯ, ಮಿಸ್ಟರ್ ಆಂಡ್ ಮಿಸೆಸ್ ಎಂಬೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆರಡೂ ಸನಿಮಾಗಳೀಗ ಬಿಡುಗಡೆಯ ಹೊಸ್ತಿಲಿನಲ್ಲಿವೆ.
ಹೀಗೆ ಪರಭಾಷಾ ನೆಲದಲ್ಲಿಯೂ ನೆಲೆ ಕಂಡುಕೊಂಡು, ಕನ್ನಡ ಚಿತ್ರರಂಗದಲ್ಲಿಯೂ ಮಿಂಚುವ ಲಕ್ಷಣಗಳನ್ನ ಹೊಂದಿರುವ ಅಕ್ಷಿತಾ ಕೊಡಗಿನವರು. ಬಿಎಸ್‌ಸಿ ಪದವೀಧರೆಯಾಗಿರೋ ಅಕ್ಷಿತಾ ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಕುಟುಂಬದಲ್ಲಿ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡಾ ಆರಂಭದಿಂದಲೇ ನಟಿಯಾಗೋ ಕನಸು ಸಾಕಿಕೊಂಡಿದ್ದವರು ಅಕ್ಷಿತಾ. ಪದವಿ ಮುಗಿಯುತ್ತಲೇ ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ ಬಂದಾಗ ಸೀದಾ ತನ್ನ ಕನಸಿನ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆಯೂರಿದ್ದ ಈಕೆ, ಸಾಯಿ ಕುಮಾರ್ ನಟಿಸಿದ್ದ ರಿಯಲ್ ಪೊಲೀಸ್ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಮೂಲಕ ಎಂಟ್ರಿ ಪಡೆದುಕೊಂಡಿದ್ದ ಅಕ್ಷಿತಾ ಆ ನಂತರದಲ್ಲಿ ಒಂದಷ್ಟು ಚಿತ್ರಗಳಲ್ಲಿ ಸಹನಟಿಯಾಗಿ ನಟಿಸಿ, ನಂತರ ನಾಯಕಿಯಾಗಿಯೂ ಹೊರಹೊಮ್ಮಿದ್ದರು.
ಈ ನಡುವೆ ತಮಿಳು ಸೀರಿಯಲ್‌ಗಳ ಅವಕಾಶ ಸಿಕ್ಕಿ, ಅಲ್ಲಿ ಪ್ರಸಿದ್ಧಿ ಬಂದರೂ ಕನ್ನಡವೇ ಅಕ್ಷಿತಾರ ಪಾಲಿಗೆ ಪ್ರಧಾನ ಆದ್ಯತೆಯಾಗಿತ್ತು. ಕನ್ನಡದ ನೆಲೆಯಿಂದಲೇ ಬೇರೆ ಬೇರೆ ಭಾಷೆಗಳಲ್ಲಿಯೂ ನಟಿಸಬೇಕೆಂಬುದು ಅವರ ಬಯಕೆ. ಓರ್ವ ನಟಿಯಾಗಿ ಅಕ್ಷಿತಾರದ್ದು ಭಿನ್ನ ಅಭಿರುಚಿ. ಸಿಕ್ಕ ಅವಕಾಶಗಳನ್ನು ಅಳೆದೂ ತೂಗಿ ಒಪ್ಪಿಕೊಳ್ಳುವ ಈಕೆಯ ಪ್ರಧಾನ ಆದ್ಯತೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೇ. ನಟನೆಗೆ ಅವಕಾಶವಿರುವ ಭಿನ್ನ ಪಾತ್ರಗಳಲ್ಲಿ ಮಿಂಚುವ ಆಸೆ ಹೊಂದಿರುವ ಅಕ್ಷಿತಾ ಈಗ ತಮಿಳಿನಲ್ಲಿ ನಾಯಕಿಯಾಗಿ ಅವತರಿಸಿದ್ದಾರೆ. ತೆಲುಗಿಗೂ ಎಂಟ್ರಿ ಕೊಡುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಕನ್ನಡದಲ್ಲಿಯೂ ಒಂದಷ್ಟು ಒಳ್ಳೆಯ ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿವೆ. ಸ್ತ್ರಿ ಪ್ರಧಾನ ಚಿತ್ರದ ಕನಸು ಹೊಂದಿರೋ ಅಕ್ಷಿತಾ, ಅಂಥಾದ್ದೊಂದು ಅಮೋಘ ಅವಕಾಶ ಕನ್ನಡದಿಂದಲೇ ಸಿಗುವ ನಿರೀಕ್ಷೆ ಹೊಂದಿದ್ದಾರೆ.