ಬಾಲಿವುಡ್ (Bollywood) ನಟಿ ಐಶ್ವರ್ಯ ರೈ (Aishwarya Rai) ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದೆ. ಮದುವೆಯಾಗಿ ಮಕ್ಕಳಾಗಿದ್ದರು ಅವರ ಮೇಲಿರುವ ಕ್ರೇಜ್ ಕಮ್ಮಿಯಾಗಿಲ್ಲ. ಹೀಗಿರುವಾಗ ಐಶ್ವರ್ಯ ರೈ ಅವರ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ (Passport) ಬಳಕೆ ಮಾಡಿದ ಖದೀಮರು ಪೊಲೀಸರ ಕೈ ಸೆರೆಯಾಗಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕ್ಷಮೆ ಕೇಳಿದ ನಟ ಶ್ರೀಮುರಳಿ
ಇತ್ತೀಚೆಗೆ ಐಶ್ವರ್ಯಾ ರೈ ಹೆಸರಲ್ಲಿ ಕೆಲವರು ಆಧಾರ್ ಕಾರ್ಡ್ (Aadhar Card) ಮಾಡಿಸಿದ್ದು ಸುದ್ದಿಯಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಟಿ ಐಶ್ವರ್ಯಾ ರೈ ಹೆಸರಿನ ನಕಲಿ ಪಾಸ್‌ಪೋರ್ಟ್ ಅನ್ನೇ ಮಾಡಿಸಿದ್ದಾರೆ ಖದೀಮರು. ಅದೂ ಭಾರತದವರಲ್ಲ ವಿದೇಶಿಗರು.
ಉತ್ತರ ಪ್ರದೇಶದ ಪೊಲೀಸರು ಇಬ್ಬರು ನೈಜೀರಿಯನ್ ಹಾಗು ಒಬ್ಬ ಘಾನಾದ ಪ್ರಜೆಗಳನ್ನು ಬಂಧಿಸಿದ್ದು ಅವರಿಂದ ನಟಿ ಐಶ್ವರ್ಯ ರೈ ಅವರ ನಕಲಿ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಜೊತೆಗೆ ನಾಲ್ಕು ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾನಲ್ಲಿ ವಾಸವಿದ್ದ ಈ ಮೂವರು ವಿವಿಧ ಸೈಬರ್ ಸಂಬಂಧಿತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರಿಗೆ ಮೋಸ ಮಾಡಿ ಸುಮಾರು 1.81 ಕೋಟಿ ಹಣ ಲಪಟಾಯಿಸಿದ್ದರು. ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು, ಭಾರಿ ಮೊತ್ತದ ಹಣದ ಜೊತೆಗೆ ಐಶ್ವರ್ಯಾ ರೈ ಹೆಸರಿನಲ್ಲಿರುವ ನಕಲಿ ಪಾಸ್‌ಪೋರ್ಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.