ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮಚ್ಚು, ಲಾಂಗ್ ಜೊತೆ ಫೋಟೋ ಇರುವ ಹುಡುಗನಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ನಟಿ ಅಭಿನಯ ಹೇಳಿದ್ದಾರೆ.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ಮತ ಪ್ರಚಾರದ ಅಖಾಡಕ್ಕಿಳಿದಿರುವ ಇವರು, ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಏನೂ ತಿಳಿಯದ ಯುವಕನಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮೂಲಕ ಬಿಜೆಪಿ ಒಬ್ಬ ಉತ್ತಮ ಮಹಿಳೆಗೆ ಟಿಕೆಟ್ ತಪ್ಪಿಸಿದೆ. ಅದನ್ನು ಮಹಿಳೆಯೇ ತಿಳಿದುಕೊಳ್ಳಬೇಕು. ಅವರು ಕಷ್ಟಪಟ್ಟಿರುವ ಹೆಣ್ಣುಮಗಳು. ಹೀಗಾಗಿ ಅವರಿಗೆ ಮೋಸ ಮಾಡಿ ಆಯುಧಗಳನ್ನು ಹಿಡಿದುಕೊಂಡು ಕುಳಿತಿರುವ ಹಾಗೂ ಏನೂ ತಿಳಿಯದಿರುವ ಯುವಕನಿಗೆ ಈ ಬಾರಿ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಇದನ್ನು ಮನಗಂಡು ಮತದಾರರು ದಯವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ನೀವು ತಪ್ಪು ಮಾಡಿ 5 ವರ್ಷ ಸುಳ್ಳು ಹೇಳುವವರಿಗೆ ಮತ ಹಾಕಿದ್ದೀರಿ. ಈಗಲಾದರೂ ತಾವು ಅದನ್ನು ಅರಿತು, ನಮಗೆ ಆ ಪಕ್ಷ ಬೇಡ, ನಮಗೆ ಕಾಂಗ್ರೆಸ್ ಸರಿ ಎಂದು ದಯವಿಟ್ಟು ಈ ಬಾರಿ ಕಾಂಗ್ರೆಸ್ಸನ್ನು ಗೆಲ್ಲಿಸಿ. ನಮ್ಮ ದೇಶಕ್ಕೆ ಹಿತ ಆಗುವಂತೆ ಮಾಡಿ ಎಂದು ಮತದಾರರಲ್ಲಿ ಕೇಳಿಕೊಂಡರು.
ಇದೇ ವೇಳೆ ಕಾರ್ಯಕರ್ತರು ತುಂಬಾ ಉತ್ಸಾಹದಿಂದ ಪ್ರಚಾರಕ್ಕೆ ಇಳಿದಿದ್ದಾರೆ. ಗಾಂಧೀಜಿ, ವಿವೇಕಾನಂದ ಹಾಗೂ ಕೆಂಪೇಗೌಡ ಪ್ರತಿಮೆಗೆ ಹೂವಿನ ಹಾರ ಹಾಕಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಹೊರಟಿದ್ದೇವೆ ಅಂದ್ರು.
ಬಸವನಗುಡಿ ಕ್ಷೇತ್ರದ ಗುಟ್ಟಲ್ಲಿ, ರಾಮಕೃಷ್ಣ ಆಶ್ರಮ ಗಾಂಧಿ ಬಜಾರ್ ಸುತ್ತಮುತ್ತ ಪ್ರಚಾರ ನಡೆಯುತ್ತಿದ್ದು, ನೂರಾರು ಕಾರ್ಯಕರ್ತರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಹರಿಪ್ರಸಾದ್ ಪರ ಘೋಷಣೆ ಕೂಗುವ ಮೂಲಕ ಭರ್ಜರಿ ಪ್ರಚಾರ ನಡೆಯುತ್ತಿದೆ.
ತೇಜಸ್ವಿ ಸೂರ್ಯ ಹೇಳಿದ್ದು ಏನು?
ಕತ್ತಿಗಳ ಜೊತೆ ತನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ತೇಜಸ್ವಿ ಸೂರ್ಯ, ಆಯುಧ ಪೂಜೆ ಸಮಯದಲ್ಲಿ ನಮ್ಮ ಕಾಫಿ ಎಸ್ಟೇಟ್ ನಲ್ಲಿ ಇರುವ ಆಯುಧಗಳ ಜೊತೆ ಕುಳಿತುಕೊಂಡ ಫೋಟೋವನ್ನು ನನ್ನ ಫೇಸ್‍ಬುಕ್ ನಿಂದ ಡೌನ್‍ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದರು.
https://twitter.com/Tejasvi_Surya/status/885775335383379968