– ಮೂರು ದಿನ ಶೂಟಿಂಗ್, 17 ಕಂಡೀಷನ್
ಚಾಮರಾಜನಗರ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್‍ನ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಹರಿಸಲಿದ್ದಾರೆ.
ರಜನಿಕಾಂತ್ ಒಂದು ದಿನ ಹಾಗೂ ಅಕ್ಷಯ್ ಕುಮಾರ್ ಮೂರು ದಿನಗಳ ಕಾಲ ರಾಜ್ಯದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಹರಿಸಲಿದ್ದಾರೆ. ಇತ್ತೀಚಿಗೆ ಮಾನವ ಅಭಿವೃದ್ದಿಯಿಂದಾಗಿ ಕಾಡು ಪ್ರಾಣಿಗಳ ಸಂತತಿ ಅಪಾಯದ ನಷ್ಟದಲ್ಲಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮಾನವ-ವನ್ಯಜೀವಿ ಸಂಘರ್ಷ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಲು ಈ ಸ್ಟಾರ್‌ಗಳು ಆಗಮಿಸಿದ್ದಾರೆ.
ಈಗಾಗಲೇ ತಲೈವಾ ರಜನಿಕಾಂತ್ ಆಗಮಿಸಿದ್ದಾರೆ. ಇಂದು ಆಕ್ಷಯ್ ಕುಮಾರ್ ಆಗಮಿಸಬೇಕಾಗಿದೆ. ಅವರು ಬಂದ ನಂತರ ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಮೂಲದ ಪ್ರಕಾರ ಬಿಲ್‍ಗ್ರೇಸ್ ಸಹ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮುಂಬೈನ ಬೆನಿಜಾಯ್ ಏಶಿಯಾ ಗ್ರೂಪ್ ಸೆವೆನ್‍ಸ್ಟಾರ್ ಟಾರಸ್ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಬಂಡೀಪುರದಲ್ಲಿ ಚಿತ್ರೀಕರಣದ ಸಿದ್ಧತೆ ಪೂರ್ಣಗೊಂಡಿದೆ. ಗುಂಡ್ಲುಪೇಟೆ ಹೊರಭಾಗದಲ್ಲಿ ಹೆಲಿಪ್ಯಾಡ್ ಸಹ ನಿರ್ಮಿಸಲಾಗಿದೆ.
ಮೂರು ದಿನ ಶೂಟಿಂಗ್, 17 ಕಂಡೀಷನ್:
ನಿರ್ದೇಶಕ ಬೇಲ್‍ಗ್ರೆಸ್ ನೇತೃತ್ವದಲ್ಲಿ ನಡೆಯಲಿರುವ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಶೂಟಿಂಗ್ ಬಂಡೀಪುರದಲ್ಲಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯಲಿರುವ ಶೂಟಿಂಗ್‍ಗೆ ಅನುಮತಿ ನೀಡಲು 17 ಕಂಡೀಷನ್ ವಿಧಿಸಲಾಗಿದೆ. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ನೋಡಿಕೊಳ್ಳುವ 17 ಕಂಡೀಷನ್ ವಿಧಿಸಿ ಅನುಮತಿ ನೀಡಲಾಗಿದೆ. ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಬಂಡೀಪುರದ ಹುಲಿ ಸಂರಕ್ಷಿತಾರಣ್ಯದಲ್ಲಿ ಶೂಟಿಂಗ್ ನಡೆಯಲಿದೆ.