ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ `ಕೆಜಿಎಫ್’ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ತಿಂಗಳು ಕೆಜಿಎಫ್ ಟ್ರೇಲರ್ ರಿಲೀಸ್ ಆಗಲಿದ್ದು, ಸದ್ಯಕ್ಕೆ ಯಶ್ ಒಂದು ಮಹಾಯಾತ್ರೆಯನ್ನು ಕೈಗೊಂಡಿದ್ದಾರೆ.
ಕೆಜಿಎಫ್ ರಿಲೀಸ್‍ಗೂ ಮುನ್ನ ಯಶ್ ಮತ್ತು ಕೆಜಿಎಫ್ ಚಿತ್ರತಂಡ ದೇವರ ದರ್ಶನ ಮಾಡಿದ್ದಾರೆ. ಯಶ್ ಅನೇಕ ವರ್ಷಗಳಿಂದ ಶಿರಡಿಗೆ ಹೋಗುವುದಕ್ಕಾಗಿ ಕಾಯುತ್ತಿದ್ದರಂತೆ. ಇದೇ ಸಂದರ್ಭದಲ್ಲಿ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಆಸೆಯೂ ಅದೇ ಆಗಿತ್ತು. ಹೀಗಾಗಿ ದಿಢೀರ್ ನಿರ್ಧಾರದಲ್ಲಿ ವಿಜಯ್ ಕಿರಗಂದೂರ್ ಮತ್ತು ಒಂದಷ್ಟು ಆಪ್ತರ ಜೊತೆ ವಿಮಾನದಲ್ಲಿ ಶಿರಡಿಗೆ ಹೋಗಿದ್ದರು.
ನಟ ಯಶ್ ಸ್ನೇಹಿತರ ಜೊತೆ ಶಿರಡಿ ಬಾಬಾನ ದರ್ಶನ್ ಪಡೆದು ಬಳಿಕ ಅಲ್ಲಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ದೇವಸ್ಥಾನಕ್ಕೂ ಪೂಜೆ ಸಲ್ಲಿಸಿದ್ದಾರೆ. ಸೆಲಬ್ರಿಟಿಯಾಗಿದ್ದರೂ ಸಾಮಾನ್ಯ ಒಬ್ಬ ಭಕ್ತನಂತೆ ಯಶ್ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಯಶ್ ಆಗಮನದ ಸುದ್ದಿ ತಿಳಿದ ಮೇಲೆ ಅಲ್ಲಿನ ಮಾಧ್ಯಮಗಳು ಆಗಮಿಸಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಬಿಟ್ಟರೆ ಇನ್ಯಾರಿಗೂ ಯಶ್ ದೇವಸ್ಥಾನಗಳಿಗೆ ಭೇಟಿ ನೀಡುವ ಮುನ್ಸೂಚನೆ ಇರಲಿಲ್ಲ.
ರಾಮಾಚಾರಿಯ ದೇವಸ್ಥಾನದ ಭೇಟಿ ಹಿನ್ನೆಲೆ!
ಅಸಲಿಗೆ ಯವುದೇ ಒಂದು ದೇವತಾ ಸ್ಥಳಕ್ಕೆ ಹೋಗಬೇಕು ಅಂದರೆ ಅದಕ್ಕೆ ಕಾಲ ಕೂಡಿ ಬರಬೇಕು. ಬಹಳ ವರ್ಷಗಳಿಂದ ಯಶ್ ಈ ಜಾಗಕ್ಕೆ ಭೇಟಿ ನೀಡಬೇಕು ಅಂದುಕೊಂಡಿದ್ದರಂತೆ. ಆದರೆ ಇದೀಗ ಶಿರಡಿ ಮತ್ತು ಕೊಲ್ಲಾಪುರಕ್ಕೆ ಹೋಗುವ ಸಮಯ ಕೂಡಿಬಂತು. ಸಿನಿಮಾಗೂ ಮಿಗಿಲಾಗಿ ಯಶ್‍ಗೆ ಇದು ವೈಯಕ್ತಿಕ ಖುಷಿಯ ಸಂದರ್ಭವೂ ಹೌದು. ಮುಂದಿನ ತಿಂಗಳು ಯಶ್ ರಾಧಿಕಾ ದಂಪತಿಯ ಮಡಿಲಲ್ಲಿ ಮಗು ನಗಲಿದೆ. ರಾಧಿಕಾ ಅವರಿಗೆ ಹೆರಿಗೆಯ ಸಮಯ ಹತ್ತಿರ ಬರುತ್ತಿದೆ. ಹೀಗಾಗಿ ಪತ್ನಿಯ ಕುಶಲದ ಕಾಳಜಿಯಿಂದಲೂ ಯಶ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಯಶ್ ‘ಮೈ ನೇಮ್ ಇಸ್ ಕಿರಾಕತ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಕೆಜಿಎಫ್ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv