ಬೆಂಗಳೂರು: ನಾನು ಅಜ್ಜಿ ಆಗೋದು ಯಾವಾಗ ಎಂದು ತಾಯಿ ಕೇಳಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಶೀಘ್ರದಲ್ಲೇ ಎಂದು ನಕ್ಕು ಉತ್ತರ ಕೊಟ್ಟಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಟ ರಮೇಶ್ ಅರವಿಂದ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿಗೆ ಅತಿಥಿಯಾಗಿ ಯಶ್ ಆಗಮಿಸಿದ್ದರು. ಈ ಶೋನಲ್ಲಿ ಯಶ್ ಉತ್ತಮವಾಗಿ ಆಟವಾಡಿ ಕೊನೆಗೆ 25 ಲಕ್ಷ ರೂ. ಹಣವನ್ನು ಗೆದ್ದುಕೊಂಡು ಹೋಗಿದ್ದಾರೆ. ಆದರೆ ಯಶ್ ಅವರ ಆಟಕ್ಕಿಂತ ಈ ಕಾರ್ಯಕ್ರಮದಲ್ಲಿ ಅವರು ತಾಯಿ ಕೇಳಿದ ಪ್ರಶ್ನೆಯೇ ಎಲ್ಲರ ಗಮನವನ್ನು ಸೆಳೆದಿದೆ.
ಈ ಕಾರ್ಯಕ್ರಮದಲ್ಲಿ ಆಟದ ಮಧ್ಯೆ ಯಶ್ ಅವರಿಗೆ ಅವರ ಕುಟುಂಬದವರು ವಿಡಿಯೋ ಕಾಲ್ ಮೂಲಕ ಒಂದೊಂದು ಪ್ರಶ್ನೆ ಕೇಳುತ್ತಿದ್ದರು. ಮೊದಲು ಅವರ ತಂದೆ ಪ್ರಶ್ನೆ ಕೇಳಿದ್ದರು. ಅವರ ತಂದೆ ಕೇಳಿದ ಪ್ರಶ್ನೆ ಉತ್ತರ ಕೊಟ್ಟರು. ಬಳಿಕ ಅವರ ತಾಯಿ ಪುಷ್ಪಾ ಅವರು ವಿಡಿಯೋ ಕಾಲ್ ಮಾಡಿ “ನಾನು ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ. ನಾನು ಅಜ್ಜಿ ಆಗೋದು ಯಾವಾಗ?” ಎಂದು ಪ್ರಶ್ನೆ ಕೇಳಿದ್ದಾರೆ.
ಅಮ್ಮನ ಪ್ರಶ್ನೆಗೆ ಯಶ್ ಮೊದಲು ನಕ್ಕು ಬಳಿಕ ಉತ್ತರಿಸಿದ್ದಾರೆ. ನಾನು ಮತ್ತು ರಾಧಿಕಾ ಇಬ್ಬರು ಏಳು ವರ್ಷ ರಿಲೇಷನ್ ಶಿಪ್ ನಲ್ಲಿ ಇದ್ವಿ. ಆಗ ಇಬ್ಬರು ಕಲಾವಿದರಾಗಿದ್ದು, ಸಾರ್ವಜನಿಕವಾಗಿ ಎಲ್ಲಿಯೂ ಓಡಾಡೋಕೆ ಸಾಧ್ಯವಾಗಿಲ್ಲ. ಇಬ್ಬರಿಗೂ ಗೌರವ-ಘನತೆ ಕಾಪಾಡಿಕೊಳ್ಳಬೇಕು ಎಂಬುದು ಮನಸ್ಸಲ್ಲಿತ್ತು. ಆದ್ದರಿಂದ ನಾವು ನಮ್ಮ ಮನೆಯವರ ಜೊತೆ ಇರುತ್ತಿದ್ವಿ. ಮದುವೆಯಾದ ಮೇಲೆ ಎಲ್ಲ ಕಡೆ ಸುತ್ತಾಡೋಣ ಅಂದಕೊಂಡಿದ್ವಿ. ಆದ್ದರಿಂದ ಎರಡು ವರ್ಷ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿದ್ವಿ. ಈಗ ಮದುವೆ ಆಗಿ ಒಂದುವರೆ ವರ್ಷ ಆಗಿದೆ. ಈಗ ಮನೆಯಲ್ಲಿ, ಸಂಬಂಧಿಕರು ಒತ್ತಡ ಹಾಕುತ್ತಿದ್ದಾರೆ. ನಾನು ಈ ಬಗ್ಗೆ ಎಲ್ಲಿಯೂ ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ನಮ್ಮ ಅಮ್ಮ ಮನೆಯಲ್ಲಿ ಈ ಪ್ರಶ್ನೆ ಕೇಳಿದ್ದರೆ ರೇಗಾಡುತ್ತಿದ್ದೆ. ಸರಿಯಾದ ಜಾಗದಲ್ಲಿಯೇ ಕೇಳಿದ್ದಾರೆ. ಆದಷ್ಟೂ ಬೇಗ ಆಗುತ್ತದೆ. ಸದ್ಯಕ್ಕೆ ಇಷ್ಟೇ ಹೇಳೋದು ಎಂದು ಯಶ್ ಉತ್ತರಿಸಿದ್ದಾರೆ.
ಯಶ್ ಮತ್ತು ರಾಧಿಕಾ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. 2016ರ ಡಿಸೆಂಬರ್ 9 ರಂದು ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.