ಈಗಿನ ಯುವ ಸಮುದಾಯದ ಕಥೆಯನ್ನೊಳಗೊಂಡಿರುವ, ಭರತ್ ವರ್ಷ ನಿರ್ದೇಶನದ ‘ಇಂಟರ್ವಲ್’ (Interval Film) ಚಿತ್ರವೀಗ ಯಶಸ್ವಿಯಾಗಿ ಇಪ್ಪತೈದು ದಿನಗಳನ್ನು ದಾಟಿಕೊಂಡಿದೆ. ಸಾಮಾನ್ಯವಾಗಿ ಯುವ ಆವೇಗದ ಕಥಾನಕಗಳ ಬಗ್ಗೆ ವಯಸ್ಸಿನ ಹಂಗಿಲ್ಲದ ಆಕರ್ಷಣೆಯೊಂದು ಪ್ರೇಕ್ಷಕ ವರ್ಗದಲ್ಲಿದೆ. ಹಾಗಿರುವಾಗ ಹಾಸ್ಯದ ಧಾಟಿಯಲ್ಲಿಯೇ ಗಹನವಾದೊಂದು ಕಥೆಯನ್ನು ದಾಟಿಸುವಂತಿರುವ ಇಂಟರ್ವಲ್ ಬಗ್ಗೆ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವಿಲ್ಲ. ಟ್ರೈಲರ್ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದ ಈ ಸಿನಿಮಾವೀಗ ನೋಡುಗರನ್ನೆಲ್ಲ ಸೆಳೆದುಕೊಳ್ಳುತ್ತಾ, ಯಶಸ್ವೀ ಪ್ರದರ್ಶನಗೊಳ್ಳುತ್ತಾ ಸಾಗುತ್ತಿದೆ. ಹೀಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವವರು ಸುಕೇಶ್. ಖುದ್ದು ಅವರೇ ಒಟ್ಟಾರೆ ಸಿನಿಮಾ ರೂಪುಗೊಂಡ ಒಂದಷ್ಟು ಬೆರಗಿನ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಇದನ್ನೂ ಓದಿ:ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು
ಮೂಲತಃ ಮಾಗಡಿಯ ಹೊಸಳ್ಳಿವರಾದ ಸುಕಿ ಪಾಲಿಗೆ ಒಂದು ಸಿನಿಮಾ ರೂಪಿಸಬೇಕೆಂಬುದು ಜೀವಮಾನದ ಕನಸು. ಬದುಕೆಂಬುದು ಆಯಾ ಕಾಲಘಟ್ಟದ ಸೆಳವಿಗೆ ಸಿಕ್ಕು ಚಲಿಸುತ್ತಿದ್ದರೂ ಕೂಡಾ ಸಿನಿಮಾ ಕನಸನ್ನು ಧ್ಯಾನದಂತೆ ಹಚ್ಚಿಕೊಂಡವರು ಸುಕಿ. ಪ್ರತೀ ಹೆಜ್ಜೆಯಲ್ಲಿಯೂ ಅದಕ್ಕಾಗಿ ತನ್ನನ್ನು ತಾನು ಅಣಿಗೊಳಿಸುತ್ತಾ, ಆಸುಪಾಸಿಲ್ಲಿ ಸುಳಿದಾಡುವ ಕಥಾ ಎಳೆಗಳ ಬಗ್ಗೆ ಕುತೂಹಲದ ಕಣ್ಣಿಡುತ್ತಾ ಸಾಗಿ ಬಂದಿದ್ದ ಸುಕೇಶ್ ಪೊಗದಸ್ತಾದೊಂದು ಕಥೆಯ ಮೂಲಕ ಈ ಸಿನಿಮಾವನ್ನು ಸೃಷ್ಟಿಸಿದ್ದಾರೆ. ನಿರ್ದೇಶಕರ ಭರತ್ ವರ್ಷರ ಜೊತೆಗೂಡಿ ಅದಕ್ಕೆ ಸರಿಕಟ್ಟಾಗಿಯೇ ಸಿನಿಮಾ ರೂಪ ಕೊಟ್ಟ ತೃಪ್ತಿ ಹೊಂದಿದ್ದಾರೆ. ಹೀಗೆ ಇಂಟರ್ವಲ್ ಚಿತ್ರದ ಮೂಲಕ ಬಹುಕಾಲದ ಕನಸೊಂದನ್ನು ನನಸಾಗಿಸಿಕೊಂಡಿರುವ ಸುಕಿ ದಶಕಗಳಿಂದಲೂ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಾ ಬಂದಿರುವವರು. ಪ್ರತಿಷ್ಠಿತ ಈಸ್ಟ್ ವೆಸ್ಟ್ ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಕೇಶ್ (Sukesh) ಉಪನ್ಯಾಸಕರಾಗಿದ್ದರು. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್- ಕಿರುತೆರೆಯತ್ತ ‘ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ
ಎಲ್ಲಿಯೇ ಹೋದರೂ, ಏನನ್ನೇ ನೋಡಿದರೂ ಅದರಲ್ಲಿ ವಿಶೇಷ ಅನ್ನಿಸಿದ್ದನ್ನು ಬರೆದಿಟ್ಟುಕೊಳ್ಳುವ ಅಭ್ಯಾಸ ಸುಕಿ ಅವರದ್ದು. ಸಿನಿಮಾ ಅನ್ನೋದು ಅವರ ಪಾಲಿಗೆ ಅಡಿಕ್ಷನ್ ಇದ್ದಹಾಗೆ. ಒಂದು ಚೆಂದದ ಕಥೆ ಸಿದ್ಧಪಡಿಸಿ, ಅದನ್ನು ನಿರ್ದೇಶಕ ಭರತ್ ವರ್ಷ (Bharath Varsha) ಅವರ ಜೊತೆಗೂಡಿ ಒಪ್ಪ ಓರಣ ಮಾಡಿ ಕಡೆಗೂ ಸಿನಿಮಾ ಸಿದ್ಧಪಡಿಸಲಾಗಿದೆ. ಹಾಗಂತ ಈ ಯಾನವೇನು ಸಲೀಸಿನದ್ದಾಗಿರಲಿಲ್ಲ. ಆದರೆ, ಎಲ್ಲವನ್ನು ದಾಟಿಕೊಂಡು, ಅಂದುಕೊಂಡಂತೆಯೇ ಚೆಂದದ ಕಥೆಯೊಂದನ್ನು ರೂಪಿಸಿದ ಖುಷಿ ಅವರಿಗಿದೆ. ಹಾಗಾದರೆ, ‘ಇಂಟರ್ವೆಲ್’ ಯಾವ ಬಗೆಯ ಚಿತ್ರ? ಅದರ ವಿಶೇಷತೆಗಳೇನು ಅನ್ನೋ ಕುತೂಹಲ ಮೂಡಿಕೊಳ್ಳೋದು ಸಹಜ. ಇದು ಫ್ಯಾಮಿಲಿ ಕಾಮಿಡಿ ಡ್ರಾಮಾ ಜಾನರಿಗೊಳ ಪಡುವ ಸಿನಿಮಾ. ಯುವ ಆವೇಗದ ಈ ಕಥನ ಯುವಕರಿಗೆ ಮಾತ್ರವಲ್ಲದೇ, ಎಲ್ಲ ವಯೋಮಾನದ, ಎಲ್ಲ ಅಭಿರುಚಿಯ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ ಎಂಬುದು ಸುಕಿ ಮಾತು.
View this post on Instagram
ಗಾಂಭೀರ್ಯ ಹೊಂದಿರೋ ಕಥೆಯೊಂದನ್ನು ಕಾಮಿಡಿ ಶೈಲಿಯಲ್ಲಿ ಕಟ್ಟಿ ಕೊಡೋದು ಸವಾಲಿನ ಕೆಲಸ. ಅಂಥಾದ್ದೊಂದು ಸವಾಲನ್ನು ಸುಕಿ ಕಥೆಯ ಹಂತದಲ್ಲಿಯೇ ಎದುರಿಸಿದ್ದಾರೆ. ಆ ವಿಚಾರದಲ್ಲಿ ಗೆದ್ದಿರೋ ಖುಷಿಯೂ ಅವರಲ್ಲಿದೆ. ಇದು ಹಲವಾರು ಹೊಸತನಗಳೊಂದಿಗೆ ರೂಪುಗೊಂಡಿರುವ ಚಿತ್ರ. ಟ್ರೈಲರಿನಲ್ಲಿಯೇ ಇಂಟರ್ವೆಲ್ ಇಟ್ಟ ಭಾರತದ ಪ್ರಥಮ ಚಿತ್ರವಾಗಿಯೂ ಇದು ದಾಖಲಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲಿಯೂ ಕೂಡ ಒಂದು ಹಂತದಲ್ಲಿ ಇಂಟರ್ವಲ್ (Interval) ಎದುರಾಗುತ್ತೆ. ಸೋಲು, ಹತಾಶೆ, ದಣಿವು ಸೇರಿದಂತೆ ಅದಕ್ಕೆ ನಾನಾ ಕಾರಣಗಳಿರಬಹುದು. ಆ ಹಂತದಲ್ಲಿ ಮುಂದೇನು ಎಂಬ ಪ್ರಶ್ನಾರ್ಥಕ ಚಿನ್ಹೆ ಬಿಡದೇ ಕಾಡುತ್ತೆ. ಆ ಘಟ್ಟದಲ್ಲಿ ತೆಗೆದುಕೊಳ್ಳೋ ನಿರ್ಧಾರಗಳ ಮೇಲೆ ಮುಂದಿನ ಪಯಣಂದ ದಿಕ್ಕುದೆಸೆಗಳು ನಿರ್ಧಾರವಾಗುತ್ತೆ. ಅಂಥಾದ್ದೊಂದು ಪರಿಕಲ್ಪನೆಯಲ್ಲಿ, ಇಂಜಿನಿಯರಿಂಗ್ ಮುಗಿಸಿಕೊಂಡು ಕೆಲಸ ಅರಸುತ್ತಾ ಬೆಂಗಳೂರು ಸೇರೋ ಹಳ್ಳಿ ಮೂಲಕದ ಹುಡುಗರ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಲವ್ವು, ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳನ್ನೂ ಹೊಂದಿರುವ ಈ ಸಿನಿಮಾದಲ್ಲಿ ಹಾಸ್ಯಕ್ಕೇ ಹೆಚ್ಚು ಒತ್ತು ಕೊಡಲಾಗಿದೆಯಂತೆ. ಅದಕ್ಕೀಗ ನೋಡುಗರು ಫಿದಾ ಆಗಿದ್ದಾರೆ.
ಇನ್ನುಳಿದಂತೆ ಸಂಭಾಷಣೆಯಲ್ಲಿಯೂ ಕೂಡಾ ಈ ಸಿನಿಮಾ ಪ್ರೇಕ್ಷಕರನ್ನು ಮೋಡಿಗೀಡು ಮಾಡಲಿದೆ ಎಂಬ ಸುಕಿ ನಂಬಿಕೆ ನಿಜವಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾವಾದರೂ ಪಂಚಿಂಗ್ ಡೈಲಾಗುಗಳೇ ಪ್ರಧಾನ ಆಕರ್ಷಣೆಯಾಗಿರುತ್ತದೆ. ಇಡೀ ಸಿನಿಮಾದಲ್ಲಿ ಬೆಳೆಣಿಕೆಯಷ್ಟು ಪರಿಣಾಮಕಾರಿ ಡೈಲಾಗುಗಳಿರುತ್ತವೆ. ಆದರಿಲ್ಲಿ ಪ್ರತೀ ಸೀನುಗಳನ್ನೂ ಕೂಡಾ ಪಂಚಿಂಗ್ ಡೈಲಾಗುಗಳಿಂದ ಕಳೆಗಟ್ಟುವಂತೆ ಮಾಡಲಾಗಿದೆ. ಅದಕ್ಕೀಗ ಪ್ರೇಕ್ಷಕರ ಕಡೆಯಿಂದಲೂ ಭರಪೂರ ಮೆಚ್ಚುಗೆ ಮೂಡಿಕೊಂಡಿದೆ. ಹಲವಾರು ಪ್ರಯೋಗಗಳನ್ನೂ ಹೊಂದಿರುವ, ಸ್ಕ್ರೀನ್ ಪ್ಲೇನಲ್ಲಿಯೂ ಹೊಸತನ ಹೊದ್ದುಕೊಂಡಿರುವ ಈ ಸಿನಿಮಾ ಹಾಸ್ಯ ಪ್ರಧಾನವಾದರೂ ಭಾವುಕ ಸ್ಪರ್ಶವೂ ಇದೆಯಂತೆ. ಅದರೊಂದಿಗೇ ಗಹನವಾದ ಮೆಸೇಜುಗಳೂ ಇವೆ. ಅವೆಲ್ಲವೂ ಸೇರಿ ಇಂಟರ್ವಲ್ ಅನ್ನು ಭಿನ್ನ ಸಿನಿಮಾವಾಗಿಸಿವೆ ಎಂಬ ಅಭಿಪ್ರಾಯ ಸುಕಿ ಅವರದ್ದು.
View this post on Instagram
‘ಸತ್ಯ’ ಸೀರಿಯಲ್‌ನ ಬಾಲಾ ಎಂಬ ಪಾತ್ರದ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ಶಶಿರಾಜ್. ಅವರು ಈ ಸಿನಿಮಾದ ನಾಯನಾಗಿ ಚೆಂದದ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಖಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್ ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಕಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಕಿ ನಿಭಾಯಿಸಿದ್ದಾರೆ.