ಇಸ್ಲಾಮಾಬಾದ್: ಪಾಕಿಸ್ತಾನ ನಟ, ಸಿಂಗರ್ ಮೋಸಿನ್ ಅಬ್ಬಾಸ್ ಹೈದರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ಫಾತಿಮಾ ಸೋಹೆಲ್ ಆರೋಪ ಮಾಡಿದ ಪತ್ನಿ. ನನ್ನ ಪತಿ ಮೋಸಿನ್ ನನಗೆ ಮೋಸ ಮಡುತ್ತಿದ್ದಾರೆ ಎಂಬ ವಿಷಯ ನನಗೆ ತಿಳಿಯಿತು. ಇದನ್ನು ಪ್ರಶ್ನಿಸಿದ್ದಾಗ ಅವರು ನಾನು ಗರ್ಭಿಣಿ ಎಂಬುದನ್ನು ನೋಡದೇ ನನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಹಲ್ಲೆಗೊಳಗಾಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ನವೆಂಬರ್ 26, 2018ರಂದು ನನ್ನ ಪತಿ ನನಗೆ ಮೋಸ ಮಾಡುತ್ತಿದ್ದಾರೆ ಎಂಬ ವಿಷಯ ನನಗೆ ತಿಳಿಯಿತು. ಈ ವಿಷಯದ ಬಗ್ಗೆ ನಾನು ಅವರನ್ನು ಪ್ರಶ್ನಿಸಿದ್ದಾಗ ಅವರು ಮುಜುಗರಕ್ಕೊಳಗಾಗುವ ಬದಲು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ನಾನು ಗರ್ಭಿಣಿಯಾಗಿದ್ದೆ. ಮೋಸಿನ್ ನನ್ನ ತಲೆಕೂದಲು ಎಳೆದು, ನನಗೆ ನೆಲದ ಮೇಲೆ ಬೀಳಿಸಿ, ನನ್ನ ಮುಖಕ್ಕೆ ಹೊಡೆದಿದ್ದಾರೆ. ನನ್ನ ಪತಿ ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ ನಾನು ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ಅವರು ನನ್ನ ಜೊತೆ ಇರಲಿಲ್ಲ. ಬದಲಿಗೆ ಅವರು ತಮ್ಮ ಗರ್ಲ್ ಫ್ರೆಂಡ್ ಜೊತೆ ಇದ್ದರು. ಮಗುವಿಗೆ ಜನ್ಮ ನೀಡಿದ ಎರಡು ದಿನದ ಬಳಿಕ ಸಾರ್ವಜನಿಕರ ಗಮನ ಸೆಳೆಯಲು ಅವರು ನನ್ನ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಂಡರು ಎಂದು ಪೋಸ್ಟ್ ನಲ್ಲಿ ಫಾತಿಮಾ ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಮೋಸಿನ್, “ನಾನು ಸತ್ಯದೊಂದಿಗೆ ಬರುತ್ತೇನೆ. ಆಕೆ ಈ ರೀತಿ ಮಾಡಿದ್ದು ನನಗೆ ಖುಷಿ ಇದೆ. ನಾನು ಸುಮಾರು ದಿನಗಳಿಂದ ಇದಕ್ಕಾಗಿ ಕಾಯುತ್ತಿದ್ದೆ. ಈಗ ನಾನು ಸಾಕ್ಷಿ ಸಮೇತ ಸಾರ್ವಜನಿಕರ ಮುಂದೆ ಬರುತ್ತೇನೆ. ಕಳೆದ ಮೂರು ವರ್ಷದಲ್ಲಿ ನಮ್ಮ ಸಂಬಂಧದಲ್ಲಿ ಏನೂ ನಡೆಯಿತು ಎನ್ನುವುದನ್ನು ಇಡೀ ಜಗತ್ತಿಗೆ ಹೇಳುತ್ತೇನೆ. ಶೀಘ್ರದಲ್ಲೇ ನಾನು ಸುದ್ದಿಗೋಷ್ಠಿಯನ್ನು ಸಕರೆಯುತ್ತೇನೆ ಎಂದು ಹೇಳಿದ್ದಾರೆ.