ಯಜಮಾನ (Yajamana) ಪ್ರೀಮಿಯರ್ ಲೀಗ್ ಮತ್ತೆ ಬಂದಿದೆ. ಇದು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಭಿಮಾನಿಗಳಿಗೋಸ್ಕರ್ ನಡೆಯುವ ಕ್ರಿಕೆಟ್ (Cricket) ಪಂದ್ಯಾವಳಿ. ಕಳೆದೆರೆಡು ವರ್ಷಗಳಿಂದ ಯಶಸ್ವಿ ಆಯೋಜಿಸಿಕೊಂಡು ಬರ್ತಿರುವ ವೈಪಿಎಲ್ ಮೇ 4 ಮತ್ತು 5 ರಂದು ಎರಡು ದಿನಗಳ ಕಾಲ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಎಂಎಂ ಲೆಗಸಿನಲ್ಲಿ ನಿನ್ನೆ ಜರ್ಸಿ ಬಿಡುಗಡೆ ಮಾಡಲಾಯಿತು. ನಟ ಜಯರಾಮ್ ಕಾರ್ತಿಕ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಇದೇ ವೇಳೆ ನಟ ಜಯರಾಮ್ ಕಾರ್ತಿಕ್ ಮಾತನಾಡಿ, ವಿಷ್ಣು ಸೇನಾ ಸಮಿತಿಗೆ ವಂದನೆಗಳು. ಇದು ಯಜಮಾನ ಪ್ರೀಮಿಯರ್ ಲೀಗ್ ನ ಮೂರನೇ ಸೀಸನ್. ಒಂದು ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಕಷ್ಟ. ಇದೆಲ್ಲಾ ಫ್ಯಾನ್ಸ್ ಸೇರಿಕೊಂಡು ಮೂರು ವರ್ಷದ ಹಿಂದೆ ಶುರು ಮಾಡಿದರು. ಈಗ ಮೂರನೇ ಸೀಸನ್. ನನ್ನ ಪ್ರೀತಿಯ ಅಚ್ಚುಮೆಚ್ಚಿನ ಆಕ್ಟರ್ ವಿಷ್ಣು (Vishnuvardhan) ಸರ್ ಅವರ ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಯಜಮಾನ ಪ್ರೀಮಿಯರ್ ಲೀಗ್ ಟೈಟಲ್ ಚೆನ್ನಾಗಿದೆ. ಇದು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ನಮಗೆ ವಿಷ್ಣು ಸರ್ ಸ್ಫೂರ್ತಿ. ವೈಪಿಎಲ್ ನಲ್ಲಿ ಭಾಗವಹಿಸಲಿರುವ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಎಂದರು.
ಯದುನಂದನ್ ಗೌಡ ಮಾತನಾಡಿ, ಯಜಮಾನ ಪ್ರೀಮಿಯರ್ ಲೀಗ್ ನ ಮೂರು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ್ದೇವು. ಪ್ರೀಮಿಯರ್, ಐಪಿಎಲ್ ಅಂತಾ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಾರೆ. ನಾವು ಯಾಕೆ ವಿಷ್ಣು ಸರ್ ಹೆಸರಿನಲ್ಲಿ ಮಾಡಬಾರದು ಎಂದು ಅವರ ಹೆಸರಲ್ಲಿ ಶುರು ಮಾಡಿದೆವು. ಕನ್ನಡ ಇಂಡಸ್ಟ್ರೀಗೆ ಕ್ರಿಕೆಟ್ ಪರಿಚಯಿಸಿದ್ದು,ನಮ್ಮ ಯಜಮಾನರು. ವಿಷ್ಣು ಸರ್ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಅಭಿಮಾನಿಗಳೇ ಸೇರಿಕೊಂಡು ಯಜಮಾನ ಪ್ರೀಮಿಯರ್ ಲೀಗ್ ಪ್ರಾರಂಭಿಸಿದೆವು. ಅಭಿಮಾನಿಗಳ ನಡುವಿನ ಸ್ಟಾರ್ ವಾರ್ ಹೊಡೆದು ಹಾಕಿ ಎಲ್ಲಾ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಯಜಮಾನ ಪ್ರೀಮಿಯರ್ ಲೀಗ್ ಮೂಲಕ ಮಾಡಲಾಗಿದೆ. ನಿಮ್ಮ ಸಹಕಾರ ಇದ್ದರೆ ಈ ಪಂದ್ಯಾವಳಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.