ತಮಿಳುನಾಡಿನ (Tamil Nadu) ವಿಲ್ಲುಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಟ್ರಾನ್ಸ್‌ಜೆಂಡರ್ ಬ್ಯೂಟಿ ಕಂಟೆಸ್ಟ್‌ಗೆ (Transgender Beauty Contest) ಅತಿಥಿಯಾಗಿ ತೆರಳಿದ್ದ ತಮಿಳು ನಟ ವಿಶಾಲ್ (Actor Vishal) ವೇದಿಕೆಯ ಮೇಲೆ ಕುಸಿದು ಬಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಕಾರ್ಯಕ್ರಮದ ವೇಳೆ ವಿಶಾಲ್ ಹಠಾತ್ತನೆ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಮಾಜಿ ಸಚಿವ ಕೆ. ಪೊನ್ಮುಡಿ ಹಾಗೂ ಕಾರ್ಯಕ್ರಮ ಆಯೋಜಕರು, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ವೈದ್ಯಕೀಯ ಹೇಳಿಕೆ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!
ಇತ್ತೀಚೆಗೆ ಅವರ ಅನಾರೋಗ್ಯದ ಬಗ್ಗೆ ಹಲವಾರು ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಅಭಿಮಾನಿಗಳು ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಅವರನ್ನು ಒತ್ತಾಯಿಸುತ್ತಿದ್ದಾರೆ. ಇದೀಗ ಈ ಘಟನೆಯು ವಿಶಾಲ್ ಮತ್ತು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ವಿಶಾಲ್ ಅವರ ಮ್ಯಾನೇಜರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಊಟ ಮಾಡದ ಕಾರಣ ಅವರ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದಿದ್ದಾರೆ. ಇನ್ನೂ ಈ ವರ್ಷ ಜನವರಿಯಲ್ಲಿ ಡೆಂಗ್ಯೂನಿಂದ ಬಳಲಿ ಅವರು ಚೇತರಿಸಿಕೊಂಡಿದ್ದರು. ಈ ವೇಳೆ ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ನಿರಂತರವಾಗಿ ಪ್ರಾರ್ಥಿಸಿದ್ದರು.
ಜನವರಿಯಲ್ಲಿ ‘ಮದಗಜರಾಜ’ (Madha Gaja Raja) ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ, ಅವರ ಮಾತು ತೊದಲುತ್ತಿತ್ತು. ಅಲ್ಲದೇ ಕೈ ಸಹ ನಡುಗುತ್ತಿತ್ತು. ಅವರ ಈ ಸ್ಥಿತಿ ಕಂಡು ಫ್ಯಾನ್ಸ್ ಆಘಾತಗೊಂಡಿದ್ದರು. ಇದನ್ನೂ ಓದಿ: ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್ ಪೂಜಾರಿ ನಿಧನ