ಚಾಮರಾಜನಗರ: ಪ್ರಜಾಕೀಯ ಪಕ್ಷಕ್ಕೆ ರೈತರನ್ನು ಹಾಗೂ ಗ್ರಾಮೀಣ ಭಾಗದ ಜನರನ್ನು ಸೆಳೆಯುವ ಉದ್ದೇಶದಿಂದ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸದ್ದಿಲ್ಲದೇ ಗ್ರಾಮೀಣ ಭಾಗಗಳಲ್ಲಿ ವಾಸ್ತವ್ಯ ಹೂಡಿ ರೈತರ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ.
ಶುಕ್ರವಾರ ರಾತ್ರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಉಪ್ಪಿ, ಬೆಳಗ್ಗೆ ಗ್ರಾಮಸ್ಥರ ಜೊತೆ ಹಾಗೂ ರೈತರೊಂದಿಗೆ ಸಭೆ ನಡೆಸಿ, ರೈತರಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದ್ರು.
ಇದೇ ವೇಳೆ ಮಾತನಾಡಿದ ಉಪೇಂದ್ರ, ಚಾಮರಾಜನಗರ ಭದ್ರಕೋಟೆ ಎಂದು ನಾನು ಇಲ್ಲಿಗೆ ಬಂದಿಲ್ಲ. ಇಲ್ಲಿನ ಜನರ ಸಮಸ್ಯೆ ತಿಳಿಯಲು, ಗ್ರೌಂಡ್ ರಿಯಾಲಿಟಿ ಚೆಕ್ ಮಾಡಲು ಬಂದಿದ್ದೇನೆ. ಇಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರವನ್ನು ಪಟ್ಟಿ ಮಾಡಲು ಇಲ್ಲಿನ ಜನರಿಗೆ ಹೇಳಿದ್ದೇನೆ ಎಂದ್ರು.
ಈ ಭಾಗದಲ್ಲಿ ಯಾವ ಪಕ್ಷ ಇದೆ, ಇಲ್ಲಿ ಯಾರು ಅಭ್ಯರ್ಥಿ ಎಂಬುದು ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳೋದಕ್ಕೆ ನಾನು ಇಲ್ಲಿ ಬಂದಿಲ್ಲ. ನನ್ನ ನಾಲ್ಕೈದು ಟೀಂಗಳು ಗ್ರೌಂಡ್ ರಿಯಾಲಿಟಿ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅಂದ್ರೆ ಕೃಷಿ, ಆರೋಗ್ಯ, ಕೆರೆ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಹೀಗಾಗಿ ನಾನು ಬಂದು ಅದರ ರಿಯಾಲಿಟಿ ನೋಡ್ತಾ ಇದ್ದೀನಿ. ಇಲ್ಲಿನ ಕೆರೆಗಳು ಹೇಗಿವೆ, ಅವುಗಳನ್ನು ಹೇಗೆ ಸರಿಪಡಿಸಬಹುದು, ಜನರು ಅದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುವುದರ ಬಗ್ಗೆ ನೋಡಲು ಬಂದಿದ್ದೇನೆ. ಯಾವುದೇ ಬೇರೆ ಉದ್ದೇಶ ನನಗಿಲ್ಲ ಅಂತ ಹೇಳಿದ್ರು.
ಇದನ್ನೂ ಓದಿ: ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ
ಸತ್ಯದ ದಾರಿಗೆ ನಾವು ಬರಲೇ ಬೇಕು. ಇದೇ ರೀತಿ ಸುಳ್ಳಿನ ಜೀವನದಲ್ಲಿ ಎಷ್ಟು ದಿನ ಅಂತ ಇರಕ್ಕಾಗುತ್ತೆ. ಗೊತ್ತಿದ್ದರೂ ಕೂಡ ಇದೇ ಸತ್ಯ ಅಂತ ಹೇಳಿಕೊಂಡು ತಿರುಗುತ್ತೇವೆ. ಇದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಅಂತ ಪರಿಸ್ಥಿತಿ ಬರೋದು ತುಂಬಾ ದುರದೃಷ್ಟಕರವಾದುದು. ಮುಂದಿನ ಜನಾಂಗದ ದೃಷ್ಟಿಯಿಂದ ನಾವು ಇದನ್ನೆಲ್ಲಾ ಯೋಚನೆ ಮಾಡಬೇಕು ಅಂತ ಹೇಳಿದ್ರು.
ಒಬ್ಬ ನಾಯಕನನ್ನು ಆಯ್ಕೆ ಮಾಡಿದ ಮೇಲೆ ಕೆಲವು ಕೆಲಸಗಳನ್ನು ಮಾಡೋದಕ್ಕಷ್ಟೆ ಹೊರತು ಬೇರೆ ವಿಷಯಗಳಲ್ಲಿ ಭಾಗಿಯಾಗೋದಕ್ಕಲ್ಲ, ಇಬ್ಭಾಗ ಮಾಡೋದಕ್ಕಲ್ಲ. ಬೇಸರದ ವಿಷಯಗಳನ್ನು ಮಾತನಾಡೋದಕ್ಕಲ್ಲ, ದೂಷಿಸೋದಕ್ಕಲ್ಲ. ಹೀಗಾಗಿ ಇಲ್ಲಿ ಪ್ರಜೆಗಳ ಬಗ್ಗೆ ಯೋಚನೆ ಮಾಡೋಣ. ಇದು ಎಲ್ಲರ ದೇಶ. ಹೀಗಾಗಿ ಎಲ್ಲರೂ ಪ್ರಯತ್ನ ಪಡಲೇಬೇಕು. ಅದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ಯಾರನ್ನೂ ವಿರೋಧಿಸುವುದಿಲ್ಲ ಎಂದು ತಿಳಿಸಿದ್ರು.
ಇಲ್ಲಿ ದುಡ್ಡು ಮಾಡಿ ವಿದೇಶಕ್ಕೆ ಹೋಗಿ ದುಡ್ಡು ವೇಸ್ಟ್ ಮಾಡಿ ಒಂದು ತಿಂಗ್ಳು ಇದ್ದು, ಎಂಜಾಯ್ ಮಾಡಿ ಬರೋ ಬದಲು ವರ್ಷಾನುಗಟ್ಟಲೇ ಇರೋ ನಮ್ಮ ದೇಶವನ್ನೇ ಫಾರಿನ್ ಕಂಟ್ರಿಯನ್ನಾಗಿ ಮಾಡೋಣ ಅಂತ ಅಂದ್ರು.
ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ನಾಯಕರಾಗಬೇಕು, ಬೆಂಬಲಿಗರಾಗಬೇಡಿ. ಯಾಕಂದ್ರೆ ದೇವರು ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸಾಮಥ್ರ್ಯ ಕೊಟ್ಟಿರುತ್ತಾನೆ. ಇದು ಪ್ರಜಾಕಾರಣ, ರಾಜಕಾರಣ ಅಲ್ಲ. ನಿಮ್ಮ ಕೊಡುಗೆ ಅತ್ಯಮೂಲ್ಯವಾದುದು. ಹೀಗಾಗಿ ನಾನು ಯಾವತ್ತೂ ಹೇಳ್ತಾ ಇರೋದು ನನಗೆ ನಾಯಕರು ಬೇಕು ಅಂತ ಹೇಳಿದ್ರು.