ಈ ಹಿಂದೆ ದೇಶಪ್ರೇಮ ಸಾರುವ ಆ್ಯಕ್ಟ್ 370 ಎಂಬ ಚಿತ್ರ ನಿರ್ದೇಶಿಸಿದ್ದ ಕೆ.ಶಂಕರ್ (K. Shankar) ಅವರೀಗ ಕಾಮಿಡಿ ಜಾನರ್ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಲೈರಾ ಎಂಟರ್ ಟೈನ್ಮೆಂಟ್ ಅಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ನಿರ್ಮಿಸುತ್ತಿರುವ, ಕೆ.ಶಂಕರ್ ನಿರ್ದೇಶನವಿರುವ ಆ ಚಿತ್ರದ ಹೆಸರು ‘ನನಗೂ ಹೆಂಡ್ತಿ ಬೇಕು’ (Nanagu Hendti Beku). ದೃಷ್ಟಿ ವಿಕಲಚೇತನನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊಂದಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಕೆ. ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಂಪೂರ್ಣ ಕಾಮಿಡಿ ಜಾನರ್ ಚಿತ್ರವಾಗಿದೆ.
ಮದುವೆಯಾಗಲು ಹೊರಟು ಒಂದು ಹೆಣ್ಣುಕೂಡ ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ (Tabla Nani) ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿಗೆ ಎದುರು ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಕರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಒಬ್ಬ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಎರಡು ಹಾಡುಗಳಿದ್ದು, ಕೆ.ಎಮ್. ಇಂದ್ರ ಅವರ ಸಂಗೀತ ಸಂಯೋಜನೆಯಿದೆ.
ಇಡೀ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ತಬಲಾ ನಾಣಿ, ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶೃತಿ, ಚೈತ್ರಾ ಕೋಟೂರ್ (Chaitra Kotooru), ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
Web Stories