ಬೆಂಗಳೂರು: ದೇಶ ಕಾಯುವ ಮೂಲಕ ನಮ್ಮನ್ನು ರಕ್ಷಣೆ ಮಾಡುವ ಯೋಧರಿಗೆ ಹಲವರು ಹುತಾತ್ಮ ಯೋಧರಿಗೆ ಹಲವರು ವಿವಿಧ ಸಹಾಯ ಮಾಡುತ್ತಿದ್ದಾರೆ. ಇದರಂತ ಮಂಗಳೂರು ಮೂಲದ ನಟ ಸುಮನ್ ಅವರು ಕೂಡ ಯೋಧರ ನೆರವಿಗೆ ಬಂದಿದ್ದು, ತಮ್ಮ 175 ಎಕ್ರೆ ಜಮೀನು ದಾನ ನೀಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಸಿನಿಮಾ ಕ್ಷೇತ್ರಕ್ಕೆ ಬಂದ ಬಳಿಕ ನನಗೆ ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬ ಪ್ರಶ್ನೆ ಮೂಡಿತ್ತು. ಇದೇ ವೇಳೆ ನನ್ನ ಪತ್ನಿ ಶಿರಿಷಾ ಅವರು ಒಂದು ಉತ್ತಮ ಸಲಹೆ ನೀಡಿದರು. ನಮ್ಮ ಬಳಿ ಇರುವ 175 ಎಕರೆ ಜಮೀನನ್ನು ಯೋಧರಿಗೆ ನೀಡುವ ನಿರ್ಧಾರವನ್ನು ನಮ್ಮ ಕುಟುಂಬ ಮಾಡಿದೆ ಎಂದು ಹೇಳಿದರು.
ನಾನು ಕಳೆದ 15 ವರ್ಷದಗಳ ಹಿಂದೆ ಸಿನಿಮಾ ಸ್ಟುಡಿಯೋ ನಿರ್ಮಾಣ ಮಾಡುವ ನನ್ನ ಕನಸಿನ ಉದ್ದೇಶದಿಂದ 175 ಎಕ್ರೆ ಪ್ರದೇಶವನ್ನು ಹೈದರಾಬಾದ್ ಸನಿಹದಲ್ಲಿ ಖರೀದಿ ಮಾಡಿದ್ದೆ. ಆದರೆ ಈಗ ನನಗೆ ಸ್ಟುಡಿಯೋ ನಿರ್ಮಾಣದ ಕನಸು ಇಲ್ಲ. ಅದ್ದರಿಂದ ಈ ವರ್ಷದ ಅಂತ್ಯದಲ್ಲಿ ಅರ್ಹ ಕಾರ್ಗಿಲ್ ಹುತಾತ್ಮ ಯೋಧರಿಗೆ ನೀಡುವ ಕಾರ್ಯ ಆರಂಭಿಸುತ್ತೇನೆ ಎಂದು ವಿವರಿಸಿದರು.
ಹಣದ ಸಹಾಯ ಮಾಡಿದರೆ ಅದು ಕೆಳ ದಿನಗಳ ಬಳಿಕ ಇಲ್ಲವಾಗುತ್ತದೆ. ಆದರೆ ಈ ರೀತಿ ಸಹಾಯ ಮಾಡಿದರೆ ಕನ್ನಡ ಮೂಲದ ಒಬ್ಬ ನಟ, ಸಿನಿಮಾ ಕ್ಷೇತ್ರದಿಂದ ಕಾರ್ಯ ಮಾಡಿದ್ದಾರೆ ಎಂಬ ಹೆಮ್ಮೆ ಎಲ್ಲರಿಗೂ ಇರುತ್ತದೆ. ಒಬ್ಬ ಯೋಧ ಗಡಿಯಲ್ಲಿ ಹೇಗೆ ವಾಸಮಾಡುತ್ತಾನೆ ಎಂಬುವುದನ್ನು ನಾನು ನೋಡಿದ್ದೇನೆ. ಸಾವು ಬರುತ್ತದೆ ಎಂದು ಗೊತ್ತಿದ್ದರೂ ಕೂಡ ಅವರು ಆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅಲ್ಲದೇ ಅವರ ಕುಟುಂಬಗಳ ತ್ಯಾಗವೂ ಕೂಡ ಮೆಚ್ಚುವಂತಹದ್ದು ಎಂದರು.
ದೇಶದಲ್ಲಿ ವಿವಿಧ ಭಾಷೆ, ಧರ್ಮ, ಜಾತಿಗಳಿದ್ದರು ಯೋಧರಿಗೆ ದೇಶವನ್ನು ರಕ್ಷಿಸುವುದು ಮಾತ್ರ ಮುಖ್ಯವಾಗಿರುತ್ತದೆ. ನಾವು ಇದೇ ರೀತಿ ಮಾಡಬೇಕು. ಅವರ ಹೋರಾಟ ಸ್ಫೂರ್ತಿಯಿಂದಲೇ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡುವ ಪ್ರೇರಣೆ ಲಭಿಸಿತು. ಅವರ ಕರ್ತವ್ಯ ಇದು ನನ್ನ ಸಣ್ಣ ಸಹಾಯ ಅಷ್ಟೇ. ಸಿನಿಮಾ ಕ್ಷೇತ್ರಕ್ಕೆ ಬಂದು 40 ವರ್ಷ ಆಗಿದೆ. ಈಗ ದೇಶಕ್ಕಾಗಿ ಏನಾದ್ರು ಮಾಡುವ ಕಾರ್ಯ ಸಾಗಿದೆ ಎಂದರು.
ಅಂದಹಾಗೇ ನಟ ಸುಮನ್ ಕನ್ನಡಿಗರೆ ಅದ್ರು ಹೆಚ್ಚು ಖ್ಯಾತಿ ಪಡೆದಿದ್ದು ಮಾತ್ರ ತಮಿಳು, ತೆಲುಗು, ಮಲೆಯಾಳಂ ಸಿನಿರಂಗದಲ್ಲಿ. 1980ರ ದಶಕದಲ್ಲಿ ತೆಲುವು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿ ಮಿಂಚಿದ್ದರು. ಸಿನಿಮಾ ಕಲಾವಿದರಿಗೆ ಆಂಧ್ರ ಸರ್ಕಾರ ನೀಡುವ ನಂದಿ ಪ್ರಶಸ್ತಿಯೂ ಇವರಿಗೆ ಸಿಕ್ಕಿದೆ. ಹಾಲಿವುಡ್ ಸಿನಿಮಾದಲ್ಲೂ ನಟಿಸಿರುವ ಖ್ಯಾತಿಯನ್ನು ಸುಮನ್ ಹೊಂದಿದ್ದಾರೆ.